‘ದೇಶವಿರೋಧಿ ವಿಷಯ’:ಕಾಮಿಡಿಯನ್ ಕುನಾಲ್ ಕಾಮ್ರಾ ಪ್ರದರ್ಶನ ರದ್ದುಗೊಳಿಸಿದ ಗುಜರಾತ್ ನ ವಿವಿ

ವಡೋದರಾ,ಜು.23: ಇಲ್ಲಿಯ ಮಹಾರಾಜಾ ಸಯಾಜಿರಾವ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಸಿ.ಸಿ.ಮೆಹ್ತಾ ಸಭಾಂಗಣದಲ್ಲಿ ಆ.11ರಂದು ಆಯೋಜಿಸಲಾಗಿದ್ದ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮವನ್ನು ವಿವಿ ಕುಲಪತಿಗಳು ರದ್ದುಗೊಳಿಸಿದ್ದಾರೆ. ಕಾಮ್ರಾ ಅವರ ಕಾರ್ಯಕ್ರಮಗಳು ದೇಶವಿರೋಧಿ ವಿಷಯಗಳಿಂದ ಕೂಡಿರುತ್ತವೆ ಎಂದು ಆಕ್ಷೇಪಿಸಿ ವಿವಿಯ 11 ಹಳೆಯ ವಿದ್ಯಾರ್ಥಿಗಳು ಕುಲಪತಿಗಳಿಗೆ ಪತ್ರವನ್ನು ಬರೆದಿದ್ದರು.
ಕಾರ್ಯಕ್ರಮವನ್ನು ರದ್ದುಗೊಳಿಸಿರುವ ಬಗ್ಗೆ ನಾವು ಶನಿವಾರ ರಾತ್ರಿ ಕಾಮ್ರಾ ಅವರಿಗೆ ಮೌಖಿಕ ಮಾಹಿತಿಯನ್ನು ನೀಡಿದ್ದೇವೆ. ಅವರ ಕಾರ್ಯಕ್ರಮಗಳು ದೇಶವಿರೋಧಿ ಮತ್ತು ವಿವಾದಾತ್ಮಕ ಮಾತುಗಳಿಂದ ಕೂಡಿರುತ್ತವೆ ಎಂಬ ಮಾಹಿತಿಯನ್ನು ನಮಗೆ ನೀಡಲಾಗಿದೆ. ಹೀಗಾಗಿ ಕುಲಪತಿಗಳ ಸೂಚನೆಯ ಮೇರೆಗೆ ನಾವು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೇವೆೆ ಎಂದು ಸಿ.ಸಿ.ಮೆಹ್ತಾ ಸಭಾಂಗಣದ ಸಂಯೋಜಕ ರಾಕೇಶ್ ಮೋದಿ ಅವರು ಸುದ್ದಿಗಾರರಿಗೆ ತಿಳಿಸಿದರು.
‘‘ಗುಜರಾತಿನ ಅತ್ಯಂತ ಪ್ರತಿಷ್ಠಿತ ವಿವಿಯಲ್ಲಿ ಇಂತಹ ದೇಶವಿರೋಧಿ ಹಣೆಪಟ್ಟಿ ಹಚ್ಚಿಕೊಂಡಿರುವ ಕಾಮಿಡಿಯನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ನಾವು ಯಾವ ಸಂದೇಶವನ್ನು ರವಾನಿಸುತ್ತಿದ್ದೇವೆ? ನಮ್ಮ ಮೇಲ್‌ನಲ್ಲಿ ತನ್ನ ಹೆಸರಿನ ಉಲ್ಲೇಖದಿಂದ ಜನಪ್ರಿಯತೆ ಪಡೆದುಕೊಳ್ಳಲು ಈ ಕಾಮಿಡಿಯನ್ ಅರ್ಹರಾಗಿಲ್ಲ,ಹೀಗಾಗಿ ಅವರ ಹೆಸರನ್ನು ನಾವು ಮೇಲ್‌ನಲ್ಲಿ ಕಾಣಿಸಿಲ್ಲ. ಅವರು ರಾಷ್ಟ್ರಗೀತೆಯನ್ನು ಅಣಕಿಸಿದ್ದಾರೆ,ಟುಕ್ಡೆ-ಟುಕ್ಡೆ ಗ್ಯಾಂಗ್‌ನ್ನು ಅವರು ಬಹಿರಂಗವಾಗಿ ಬೆಂಬಲಿಸಿದ್ದಾರೆ.ಎಲ್ಲ ದೇಶಪ್ರೇಮಿ ವಿವಿಗಳು ಅವರನ್ನು ವಿರೋಧಿಸುತ್ತಿವೆ, ಹೀಗಿರುವಾಗ ನಾವೇಕೆ ಅವರು ನಮ್ಮ ಪವಿತ್ರ ಸಂಸ್ಥೆಯನ್ನು ಪ್ರವೇಶಿಸಲು ಅವಕಾಶ ನೀಡುತ್ತಿದ್ದೇವೆ? 2019ರ ಚುನಾವಣೆಗೆ ಮುನ್ನ ಬಡೋದಾದ ಯುವಜನತೆಯ ಮನಸ್ಸುಗಳನ್ನು ಕೆಡಿಸಲು ಏನೋ ಸೈದ್ಧಾಂತಿಕ ಸಂಚು ನಡೆದಿದೆ ಎಂದು ನಾವು ಬಲವಾಗಿ ಶಂಕಿಸಿದ್ದೇವೆ’’ ಎಂದು ಕಮ್ರಾ ಕಾರ್ಯಕ್ರಮಕ್ಕೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಕೋರಿ ಬರೆದಿರುವ ಪತ್ರದಲ್ಲಿ ವಿವಿಯ ವಿವಿಧ ವಿಭಾಗಗಳಿಗೆ ಸೇರಿದ ಈ 11 ಹಳೆಯ ವಿದ್ಯಾರ್ಥಿಗಳು ಹೇಳಿದ್ದಾರೆ.







