ಶಿವಮೊಗ್ಗ: ಮನೆಗೆ ನುಗ್ಗಿ 7.19 ಲಕ್ಷ ರೂ. ಮೌಲ್ಯದ ನಗನಾಣ್ಯ ಅಪಹರಿಸಿದ ಕಳ್ಳರು
ಶಿವಮೊಗ್ಗ, ಜು. 23: ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಅಪಹರಿಸಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದ ಬಸವನಗುಡಿ ಬಡಾವಣೆಯ ಪಿಡಬ್ಲ್ಯೂಡಿ ಕ್ವಾಟರ್ಸ್‍ನ 1 ನೇ ತಿರುವಿನಲ್ಲಿ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ.
ಕೊಟ್ಟೂರು ಸ್ವಾಮಿ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯವರೆಲ್ಲ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮನೆಗೆ ಬೀಗ ಹಾಕಿ ಪರ ಊರಿಗೆ ತೆರಳಿದ್ದ ವೇಳೆ ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಮನೆಯ ಬಾಗಿಲ ಬೀಗ ಮುರಿದಿರುವುದನ್ನು ಗಮನಿಸಿದ ನೆರೆಹೊರೆಯವರು, ಕುಟುಂಬದವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.
ಕುಟುಂಬದವರು ಮನೆಗೆ ಆಗಮಿಸಿ ಪರಿಶೀಲಿಸಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಎರಡು ಗಾಡ್ರೇಜ್ ಬೀರುವಿನಲ್ಲಿದ್ದ 235 ಗ್ರಾಂ ತೂಕದ ಅಂದಾಜು 5,87,500 ರೂ. ಮೌಲ್ಯದ ಚಿನ್ನಾಭರಣ, 8 ಗ್ರಾಂ ತೂಕದ 2400 ರೂ. ಮೌಲ್ಯದ ಬೆಳ್ಳಿಯ ಆಭರಣ ಹಾಗೂ 65 ಸಾವಿರ ನಗದನ್ನು ಕಳ್ಳರು ಅಪಹರಿಸಿದ್ದಾರೆ.
ಒಟ್ಟಾರೆ ಸುಮಾರು 7.19 ಲಕ್ಷ ರೂ. ಮೌಲ್ಯದ ನಗನಾಣ್ಯವನ್ನು ಕಳ್ಳರು ಅಪಹರಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.







