ಕರಗಡ ನೀರಾವರಿ ಯೋಜನೆ ಕಾಮಗಾರಿ ಅಪೂರ್ಣ: ಆರೋಪ
ತನಿಖೆಗೆ ಲೋಕಾಯುಕ್ತಕ್ಕೆ ಶಿಫಾರಸು ಮಾಡಲು ನಿರ್ಣಯ

ಚಿಕ್ಕಮಗಳೂರು, ಜು.23: ತಾಲೂಕಿನ ಬಯಲು ಸೀಮೆ ಭಾಗಗಳಿಗೆ ನೀರಾವರಿ ಯೋಜನೆ ಕಲ್ಪಿಸಲು ಆರಂಭಿಸಲಾಗಿರುವ ಕರಗಡ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ ಎಂದು ಸರಕಾರ ತಿಳಿಸಿದೆ. ಆದರೆ ತಾನು ರವಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ 4 ಕಡೆಗಳಲ್ಲಿ ಕಾಮಗಾರಿ ಅಪೂರ್ಣಗೊಂಡಿದೆ. ಆದ್ದರಿಂದ ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಲೋಕಾಯುಕ್ತ ತನಿಖೆಗೆ ವಹಿಸುವುದು ಸೂಕ್ತ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಶಾಸಕ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಸಿ.ಟಿ.ರವಿ, ವಿಧಾನಸಭಾ ಅಧಿವೇಶನದಲ್ಲಿ ತಾವು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸರಕಾರ ಯೋಜನೆಯ ಮೊದಲ ಹಂತದ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದೆ ಎಂದು ತಿಳಿಸಿತ್ತು. ಆದರೆ ತಾನು ರವಿವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ಸುಮಾರು 4 ಕಡೆಗಳಲ್ಲಿ ಕೆಲಸ ಪೂರ್ಣಗೊಂಡಿಲ್ಲ. 10ಕ್ಕೂ ಹೆಚ್ಚು ಕಡೆಗಳಲ್ಲಿ ಮಣ್ಣು ಕುಸಿದಿರುವುದು ಕಂಡು ಬಂದಿತು. ಕೆಲಸ ಪೂರ್ಣಗೊಂಡಿದೆ ಎಂದು ಸರಕಾರಕ್ಕೆ ಮಾಹಿತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಈಗ ನಾಲೆಯಲ್ಲಿ ಸ್ವಲ್ಪ ಪ್ರಮಾಣದ ನೀರು ಹರಿಯುತ್ತಿದೆ. ಕೆಲಸ ಪೂರ್ಣಗೊಂಡಿದ್ದರೇ ಈ ವೇಳೆಗೆ ಈ ಭಾಗದ 3 ಕೆರೆಗಳು ತುಂಬುತ್ತಿದ್ದವು. ಜನತೆಗೂ ಅನುಕೂಲವಾಗುತ್ತಿತ್ತು. ಆದರೆ ಅಪೂರ್ಣ ಕಾಮಗಾರಿಯಿಂದಾಗಿ ಜನತೆಗೆ ಉತ್ತರ ಕೊಡಲು ತಮ್ಮಿಂದ ಆಗುತ್ತಿಲ್ಲ. ಗುತ್ತಿಗೆದಾರರಿಗೆ ಹಲವು ಬಾರಿ ಕಾಲಾವಕಾಶ ಕೊಡಲಾಗಿದೆ. ಆದರೂ ಅವರು ಕೆಲಸವನ್ನು ಪೂರ್ಣಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆಯ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತಕ್ಕೆ ವಹಿಸುವುದು ಸೂಕ್ತ. ಕಾಮಗಾರಿ ವಿಳಂಬ, ತಾಂತ್ರಿಕ ದೋಷಗಳು ಎಲ್ಲವನ್ನೂ ಕುರಿತು ತನಿಖೆ ನಡೆಸಲಿ. ಗುತ್ತಿಗೆದಾರನಿಂದ ಕಳಪೆ ಕಾಮಗಾರಿ ಆಗಿದ್ದರೆ ಅವರ ವಿರುದ್ಧ, ಅಧಿಕಾರಿಗಳಿಂದ ಲೋಪವಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ರವಿ ಸಭೆಯಲ್ಲಿ ತಿಳಿಸಿದಾಗ ಇದಕ್ಕೆ ಸಹಮತ ವ್ಯಕ್ತಪಡಿಸಿದ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಕಾಮಗಾರಿ ವಿಳಂಬವಾಗಿರುವುದರಿಂದ ಸರಕಾರದ ಬೊಕ್ಕಸಕ್ಕೆ ಹೊರೆಯಾಗಿರುವುದಲ್ಲದೇ, ಜನತೆಗೆ ಅನಾನುಕೂಲವಾಗಿದೆ. ಈ ಬಗ್ಗೆ ತನಿಖೆ ನಡೆಯುವುದು ಸೂಕ್ತ ಎಂದರು.
ಕ್ರಮಕ್ಕೆ ಶಿಫಾರಸು: ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾಗದಂತೆ ಎಷ್ಟು ಬಾರಿ ಸೂಚನೆ ನೀಡಿದರೂ ಕೆಲವು ಅಧಿಕಾರಿಗಳು ಸಭೆಗೆ ಬರುತ್ತಿಲ್ಲ. ಅನುಮತಿ ಪಡೆಯದೆ ತಮ್ಮ ಬದಲಿಗೆ ಬೇರೆಯವರನ್ನು ಸಭೆಗೆ ಕಳುಹಿಸುತ್ತಾರೆ. ಅವರಿಗೆ ಸೂಕ್ತ ಮಾಹಿತಿ ಇರುವುದಿಲ್ಲ. ಕೆಡಿಪಿ ಸಭೆಗೆ ಗೌರವವೇ ಇಲ್ಲದಂತಾಗಿದೆ. ಕೂಡಲೇ ಸಭೆಗೆ ಗೈರು ಹಾಜರಾಗಿರುವವರು ಹಾಗೂ ಅನುಮತಿ ಪಡೆಯದೆ ಬೇರೆಯವರನ್ನು ಸಭೆಗೆ ಕಳುಹಿಸಿರುವವರ ಕ್ರಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಪಂ ಹಾಗೂ ಸಿಇಒಗೆ ಪತ್ರ ಬರೆಯಿರಿ ಎಂದು ಶಾಸಕ ಸಿ.ಟಿ.ರವಿ ಸೂಚಿಸಿದರು.
ನಿವೇಶನರಹಿತರಿಗೆ ನಿವೇಶನ ನೀಡಲು ಜಾಗ ಗುರುತಿಸದಿರುವ ವಿಚಾರ ಬಂದಾಗ ಮಾತನಾಡಿದ ಜಿಪಂ ಸದಸ್ಯೆ ಕವಿತಾ ಲಿಂಗರಾಜು, ಬಿದರೆ ಗ್ರಾಮದಲ್ಲಿ 168 ಜನ ನಿವೇಶನರಹಿತರು ಇದ್ದಾರೆ. ಇವರಿಗೆಂದು ಜಾಗ ಮೀಸಲಿರಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಜಿಪಂ ಸದಸ್ಯ ಸೋಮಶೇಖರ್, ತಮ್ಮ ಕ್ಷೇತ್ರದ ಹಲವು ಗ್ರಾಮಗಳಲ್ಲಿಯೂ ಇದೇ ಸಮಸ್ಯೆ ಇದೆ. ಎಷ್ಟು ಬಾರಿ ತಿಳಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದರು.
ಬಿದರೆ ಗ್ರಾಮದಲ್ಲಿ ನಿವೇಶನರಹಿತರಿಗೆ ನೀಡಲು ಖಾಸಗಿಯವರಿಂದ ಜಾಗ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ತಾಪಂ ಇಒ ಸಿದ್ದಪ್ಪ ಸಭೆಯ ಗಮನಸೆಳೆದಾಗ, ಶಾಸಕ ಸಿ.ಟಿ.ರವಿ ಮಾತನಾಡಿ, ಕೇವಲ ಜಾಗ ಗುರುತಿಸಿದರೆ ಸಾಲದು. ಆ ಜಾಗದಲ್ಲಿ ಸುಲಭದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಅವಕಾಶವಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಜಾಗ ಖರೀದಿಸಿ ಎಂದು ತಿಳಿಸಿದರು.
ಯಗಚಿ ನದಿ ಪಾತ್ರ ಒತ್ತುವರಿ ತೆರವಿನ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕ ಸಿ.ಟಿ.ರವಿ ಪ್ರಶ್ನಿಸಿದಾಗ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕರು ಉತ್ತರಿಸಿ, ಉಪನಿರ್ದೇಶಕರ ನೇತೃತ್ವದಲ್ಲಿ 10 ಜನರ ತಂಡವನ್ನು ಸರ್ವೇಗಾಗಿ ರಚಿಸಲಾಗಿದೆ. ಒಂದು ತಿಂಗಳೊಳಗಾಗಿ ಸರ್ವೆ ಕೆಲಸ ಪೂರ್ಣಗೊಳಿಸಿ ಒತ್ತುವರಿಯಾಗಿದ್ದರೆ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಎಂ.ರಮೇಶ್, ಜಿಪಂನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಹಿರಿಗಯ್ಯ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಜಸಂತಾ ಅನಿಲ್ ಕುಮಾರ್, ಸದಸ್ಯರಾದ ಕವಿತಾ ಲಿಂಗರಾಜ್, ಸೋಮಶೇಖರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು







