ಕೊಪ್ಪ: ಹಳ್ಳಕ್ಕೆ ಹಾರಿದ 10ನೇ ತರಗತಿ ವಿದ್ಯಾರ್ಥಿ
ಕೊಪ್ಪ, ಜು.23: ಪಟ್ಟಣದ ಶ್ರೀಸಚ್ಚಿದಾನಂದ ಸರಸ್ವತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಪ್ರೀತಮ್ (15) ಎಂಬ ಬಾಲಕ ಅಂಬಳಿಕೆ ಹಳ್ಳದ ಸೇತುವೆ ಬಳಿ ಹಳ್ಳಕ್ಕೆ ಹಾರಿರುವ ಘಟನೆ ಸೋಮವಾರ ಸಂಜೆ ನಡೆದಿದೆ ಎನ್ನಲಾಗಿದೆ.
ಕೊಪ್ಪ ತಾಲೂಕಿನ ಬಂಡಿಗಡಿ ಗ್ರಾಮದ ಅರೇಕಲ್ ವಾಸಿ ಪತ್ರಕರ್ತ ಲೋಹಿತಶ್ವ ಎಂಬವರ ಎರಡನೇ ಪುತ್ರ ಪೀತಮ್ ಎಂದಿನಂತೆ ಶಾಲೆಗೆ ತೆರಳಿದ್ದಾನೆ. ಮಧ್ಯಾಹ್ನ ಶಾಲೆಬಿಟ್ಟ ನಂತರ ಅಂಬಳಿಕೆ ಹಳ್ಳದ ಸೇತುವೆ ಸಮೀಪ ಸ್ಕೂಲ್ ಬ್ಯಾಗ್ ಮತ್ತು ಚಪ್ಪಲಿ ಬಿಟ್ಟು ಹಳ್ಳಕ್ಕೆ ಹಾರಿದ್ದಾನೆಂದು ತಿಳಿದು ಬಂದಿದೆ.
'ನನ್ನ ಸಾವಿಗೆ ನಾನೇ ಕಾರಣ' ಎಂದು ಬರೆದು, ಪತ್ರವನ್ನು ತನ್ನ ಬ್ಯಾಗ್‍ನಲ್ಲಿ ಇಟ್ಟಿದ್ದಾನೆಂದು ತಿಳಿದು ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಮ್ ಪತ್ತೆ ಕಾರ್ಯಕ್ಕೆ ನಿರಂತರ ಮಳೆಯಾಗುತ್ತಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿ ಉಂಟಾಗಿದ್ದು, ಮಂಗಳವಾರ ಮುಳುಗು ತಜ್ಞರಿಂದ ಶೋಧ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.





