ತುಳು ನಾಟಕ ಕಲಾವಿದರ ಒಕ್ಕೂಟದಿಂದ ಸಚಿವೆ ಜಯಮಾಲಾರಿಗೆ ಮನವಿ

ಮಂಗಳೂರು, ಜು. 24: ಅಶಕ್ತ ಕಲಾವಿದರಿಗೆ ನೀಡುವ ಮಾಶಾಸನವನ್ನು ಒಂದೂವರೆ ಸಾವಿರದಿಂದ ಐದು ಸಾವಿರಕ್ಕೆ ಏರಿಸಬೇಕು. ಜಿಲ್ಲೆಯಲ್ಲಿ ರಂಗಮಂದಿರದ ಕಲ್ಪನೆಯನ್ನು ಸಾಕಾರಗೊಳಿಸಬೇಕು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಳು ಸಾಹಿತ್ಯ ಅಕಾಡಮಿಯಿಂದ ನಾಟಕ ಪ್ರದರ್ಶನ ಗಳಿಗೆ ಅನುದಾನ ನೀಡಲು ಇರುವ ಕಾನೂನು ತೊಡಕನ್ನು ಹೋಗಲಾಡಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ತುಳುನಾಟಕ ಕಲಾವಿದರ ಒಕ್ಕೂಟವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಡಾ. ಜಯಮಾಲ ಅವರಿಗೆ ಮನವಿ ಸಲ್ಲಿಸಿದೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಜಯಮಾಲ ಅವರನ್ನು ಭೇಟಿ ಮಾಡಿದ ಕಲಾವಿದರ ಒಕ್ಕೂಟದ ನಿಯೋಗವು ಮಹಿಳಾ ನಾಟಕೋತ್ಸವ, ಮಕ್ಕಳ ನಾಟಕೋತ್ಸವ, ಕಾಲೇಜು ರಂಗೋತ್ಸವ, ರಂಗ ತರಬೇತಿ ಶಿಬಿರ, ರಂಗ ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆರ್ಥಿಕ ನೆರವು ನೀಡಬೇಕು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಳುನಾಟಕ ಪ್ರದರ್ಶಿಸುವ ತಂಡಗಳಿಗೆ ವಿಶೇಷ ಯೋಜನೆಯಡಿ ವಿವಿಧ ಸೌಲಭ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂದರ್ಭಗಳಲ್ಲಿ ತುಳು ನಾಟಕರಂಗದ ಅರ್ಹ ಸಾಧಕ ಕಲಾವಿದರನ್ನು ಗುರುತಿಸುವುದು, ನಾಟಕ ಅಕಾಡಮಿಯಲ್ಲಿ ತುಳು ಮಾತೃಭಾಷೆಯ ಕಲಾವಿದರಿಗೂ ಸದಸ್ಯತನ ನೀಡುವುದು ಹಾಗೂ ಅಕಾಡಮಿ ಪ್ರಶಸ್ತಿಗೂ ತುಳುನಾಟಕ ರಂಗದ ಅರ್ಹ ಕಲಾವಿದರನ್ನು ಪರಿಗಣಿಸುವುದು, ರಂಗಭೂಮಿಗೆ ಸಂಬಂಧಿಸಿದಂತೆ ಸಲಕರಣೆಗಳನ್ನು ಖರೀದಿಸಲು ಆರ್ಥಿಕ ನೆರವು, ನಾಡಹಬ್ಬ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಳುನಾಡಿನ ವೀರಪುರುಷರ, ಮಹಿಳಾಮಣಿಗಳ, ಸ್ವಾತಂತ್ರ್ಯ ಹೋರಾಟಗಾರರ ಕುರಿತು ನಾಟಕ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದೆ.
ನಿಯೋಗದಲ್ಲಿ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು, ರಂಗಕರ್ಮಿ ವಿ.ಜಿ ಪಾಲ್, ಪ್ರದೀಪ್ ಆಳ್ವ ಕದ್ರಿ, ಮೋಹನ್ ಕೊಪ್ಪಳ ಕದ್ರಿ, ಗೋಕುಲ್ ಕದ್ರಿ ಉಪಸ್ಥಿತರಿದ್ದರು.