ತುಂಬ ತಡವಾಗುವ ಮೊದಲೇ ಮಧುಮೇಹದ ಎಚ್ಚರಿಕೆಯ ಸಂಕೇತಗಳನ್ನು ತಿಳಿದುಕೊಳ್ಳಿ
ಮಧುಮೇಹವು ಭಾರತದಲ್ಲಿ ಸಾವುಗಳು ಮತ್ತು ಅಂಗವಿಕಲತೆಗಳಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಈ ರೋಗವನ್ನು ನಿಯಂತ್ರಿಸದಿದ್ದರೆ ಅದು ಅಂಧತ್ವ,ನರಗಳಿಗೆ ಹಾನಿ,ಮೂತ್ರಪಿಂಡ ಕಾಯಿಲೆ ಮತ್ತು ಇತರ ಸಮಸ್ಯೆಗಳನ್ನುಂಟು ಮಾಡುತ್ತದೆ. ಅದೆಷ್ಟೋ ಜನರು ಪ್ರಿ ಡಯಾಬಿಟಿಸ್ ಅಥವಾ ಪೂರ್ವ ಮಧುಮೇಹವನ್ನು ಹೊಂದಿರುತ್ತಾರೆ,ಆದರೆ ಅದು ಅವರಿಗೆ ಗೊತ್ತಿರುವುದೇ ಇಲ್ಲ. ಹೀಗಾಗಿ ಮಧುಮೇಹದ ಎಚ್ಚರಿಕೆಯ ಸಂಕೇತಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಪ್ರಿ ಡಯಾಬಿಟಿಸ್ ಹಂತದಲ್ಲಿ ರಕ್ತದಲ್ಲಿಯ ಸಕ್ಕರೆಯ ಮಟ್ಟ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ, ಆದರೆ ಟೈಪ್ 2 ಮಧುಮೇಹವೆಂದು ನಿರ್ಧರಿಸಲು ಅಗತ್ಯವಾದ ಮಟ್ಟದಲ್ಲಿ ಇರುವುದಿಲ್ಲ. ಪ್ರಿ ಡಯಾಬಿಟಿಸ್ ಹೊಂದಿರುವವರಲ್ಲಿ ಸುಮಾರು ಅರ್ಧದಷ್ಟು ಜನರು 10 ವರ್ಷಗಳಲ್ಲಿ ಮಧುಮೇಹಕ್ಕೆ ಗುರಿಯಾಗುತ್ತಾರೆ. ಹೀಗಾಗಿ ಇದೊಂದು ಗಂಭೀರ ಆರೋಗ್ಯ ಸ್ಥಿತಿಯಾಗಿದೆ. ಶೇ.90ರಷ್ಟು ಪ್ರಿ ಡಯಾಬಿಟಿಸ್ ರೋಗಿಗಳಿಗೆ ಅದರ ಅರಿವೇ ಇರುವುದಿಲ್ಲ ಮತ್ತು ಅಧಿಕ ರಕ್ತದೊತ್ತಡ,ಹೃದಯಘಾತ ಮತ್ತು ಪಾರ್ಶ್ವವಾಯುವಿನಂತಹ ಇತರ ಸಮಸ್ಯೆಗಳ ಅಪಾಯವನ್ನು ಎದುರಿಸುತ್ತಿರುತ್ತಾರೆ ಎನ್ನುವುದು ಇನ್ನಷ್ಟು ಕಳವಳದ ವಿಷಯವಾಗಿದೆ.
ಪ್ರಿ ಡಯಾಬಿಟಿಸ್ ಇರುವವರು ಇಂತಹ ಅಪಾಯಗಳಿಂದ ದೂರವಿರಲು ಸಾಧ್ಯವಿದೆ ಎನ್ನುವುದು ಸಮಾಧಾನಕರ ಅಂಶವಾಗಿದೆ. ಅಪಾಯದ ಅಂಶಗಳನ್ನು ಗುರುತಿಸುವ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹಕ್ಕೆ ಗುರಿಯಾಗುವುದರಿಂದ ಪಾರಾಗುವ ಸಾಧ್ಯತೆಗಳಿವೆ. ತೀರ ವಿಳಂಬವಾಗುವ ಮೊದಲೇ ಮಧುಮೇಹದ ಎಚ್ಚರಿಕೆಯ ಸಂಕೇತಗಳನ್ನು ತಿಳಿದುಕೊಂಡು ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಮಧುಮೇಹದ ಸವಾಲನ್ನು ಸುಲಭವಾಗಿ ಎದುರಿಸಬಹುದಾಗಿದೆ. ಅಂತಹ ಕೆಲವು ಎಚ್ಚರಿಕೆಯ ಸಂಕೇತಗಳು ಇಲ್ಲಿವೆ.......
ನೀವು ಹೆಚ್ಚಿನ ದೇಹತೂಕವನ್ನು ಹೊಂದಿದ್ದು,ಬಾಡಿ ಮಾಸ್ ಇಂಡೆಕ್ಸ್ ಅಥವಾ ಶರೀರ ದ್ರವ್ಯರಾಶಿ ಸೂಚ್ಯಂಕವು 25ಕ್ಕಿಂತ ಹೆಚ್ಚಿದೆಯೇ?
ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದೆಯೇ?
ನಿಮ್ಮದು ಹೆಚ್ಚಿನ ಚಟುವಟಿಕೆಗಳಿಲ್ಲದ ಜೀವನಶೈಲಿಯಾಗಿದೆಯೇ?
ನಿಮಗೆ ಅಧಿಕ ರಕ್ತದೊತ್ತಡವಿದೆಯೇ?
ನಿಮ್ಮ ವಯಸ್ಸು 45 ವರ್ಷಗಳನ್ನು ದಾಟಿದೆಯೇ?
ನೀವು ಮಹಿಳೆಯಾಗಿದ್ದಲ್ಲಿ ಗರ್ಭಿಣಿಯಾಗಿದ್ದಾಗ ಮಧುಮೇಹದಿಂದ ಬಳಲಿದ್ದೀರಾ ಅಥವಾ ಒಂಭತ್ತು ಪೌಂಡ್ಗೂ ಅಧಿಕ ಭಾರದ ಮಗುವಿಗೆ ಜನನ ನೀಡಿದ್ದೀರಾ?
ಇವುಗಳಲ್ಲಿ ಯಾವುದಾದರೂ ಒಂದು ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದರೆ ನೀವು ಪ್ರಿ ಡಯಾಬಿಟಿಸ್ ಅಥವಾ ಟೈಪ್ 2 ಮಧುಮೇಹಕ್ಕೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿದ್ದೀರಿ ಎಂದು ಅರ್ಥ.
ಪ್ರಿ ಡಯಾಬಿಟಿಸ್ ನಿಮ್ಮಲ್ಲಿ ದೀರ್ಘಕಾಲದಿಂದ ಇರಬಹುದು ಮತ್ತು ಅದು ಯಾವುದೇ ಲಕ್ಷಣಗಳನ್ನು ತೋರಿಸದಿರಬಹುದು. ಇದೇ ಕಾರಣದಿಂದ ಹೆಚ್ಚಿನ ಪ್ರಕರಣಗಳಲ್ಲಿ ಪ್ರಿ ಡಯಾಬಿಟಿಸ್ ಇರುವುದು ಪತ್ತೆಯಾಗುವುದಿಲ್ಲ ಮತ್ತು ಅದು ಪತ್ತೆಯಾದಾಗ ತುಂಬ ವಿಳಂಬವಾಗಿರುತ್ತದೆ ಹಾಗೂ ಅದಾಗಲೇ ಟೈಪ್ 2 ಮಧುಮೇಹ ಒಕ್ಕರಿಸಿಕೊಂಡಿರುತ್ತದೆ. ಹೀಗಾಗಿ ಮಧುಮೇಹದ ಎಚ್ಚರಿಕೆಯ ಸಂಕೇತಗಳ ಬಗ್ಗೆ ತಿಳಿದಿರುವುದು ಒಳ್ಳೆಯದು.
ಹೆಚ್ಚಿನ ಬಾಯಾರಿಕೆ,ಪದೇ ಪದೇ ಮೂತ್ರವಿಸರ್ಜನೆ,ಅತಿಯಾದ ಬಳಲಿಕೆ ಮತ್ತು ಮಸುಕಾದ ದೃಷ್ಟಿಯಂತಹ ಲಕ್ಷಣಗಳು ಕೆಲವರಲ್ಲಿ ಕಾಣಿಸಿಕೊಳ್ಳಬಹುದು.
ನೀವು ಪ್ರಿ ಡಯಾಬಿಟಿಕ್ ಆಗಿದ್ದೀರಿ ಎನ್ನುವುದನ್ನು ವೈದ್ಯರು ಮಾತ್ರ ನಿಖರವಾಗಿ ಹೇಳಬಲ್ಲರು.
ಹೆಚ್ಚಿನ ಸಂದರ್ಭಗಳಲ್ಲಿ ನಿಮಗೆ ಪ್ರಿ ಡಯಾಬಿಟಿಸ್ ಇದೆ ಎನ್ನುವುದು ಗೊತ್ತಾದ ನಂತರವೂ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಸಹಜ ಸ್ಥಿತಿಗೆ ಮರಳಬಹುದು. ನೀವು ಅನುಸರಿಸಬಹುದಾದ ನಿರ್ದಿಷ್ಟ ಕ್ರಮವನ್ನು ನಿಮಗೆ ವೈದ್ಯರು ಸೂಚಿಸುತ್ತಾರಾದರೂ ಇಲ್ಲಿ ಕೆಲವು ಟಿಪ್ಸ್ ಇವೆ.
ದೇಹತೂಕವು ನಿಮ್ಮ ಮಧುಮೇಹ ಅಪಾಯದ ಅಂಶಗಳಲ್ಲಿ ಒಂದಾಗಿದ್ದರೆ ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಿ. ಕಡಿಮೆ ಕೊಬ್ಬು ಮತ್ತು ಕ್ಯಾಲರಿಗಳಿರುವ,ಆದರೆ ಹೆಚ್ಚು ನಾರು ಇರುವ ಆಹಾರಗಳು ಮುಖ್ಯವಾಗಿರಲಿ. ಹಣ್ಣುಗಳು,ತರಕಾರಿಗಳು ಮತ್ತು ಇಡೀ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ.
ದೇಹತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ದೇಹತೂಕದಲ್ಲಿ ಕೇವಲ ಶೇ.7ರಷ್ಟು ಇಳಿಕೆಯಾದರೂ ಟೈಪ್ 2 ಮಧುಮೇಹವುಂಟಾಗುವ ಅಪಾಯ ಅರ್ಧಕ್ಕರ್ಧ ಕಡಿಮೆಯಾಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.
ಹೆಚ್ಚು ಕ್ರಿಯಾಶೀಲರಾಗಿ. ನಿಮ್ಮ ದಿನಚರಿಯಲ್ಲಿ ಸಾಮಾನ್ಯ ವ್ಯಾಯಾಮವನ್ನು ಸೇರಿಸಿಕೊಂಡರೆ ರಕ್ತದೊತ್ತಡ ಮತ್ತು ದೇಹತೂಕ ಕಡಿಮೆಯಾಗುತ್ತವೆ. ವಾರಕ್ಕೆ ಕನಿಷ್ಠ ಐದು ದಿನಗಳ ಕಾಲ ಪ್ರತಿದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನ್ನು ರೂಢಿಸಿಕೊಳ್ಳಿ.
ಮಧುಮೇಹದ ಎಚ್ಚರಿಕೆಯ ಸಂಕೇತಗಳನ್ನು ತಿಳಿದುಕೊಳ್ಳುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ.