ಎಸ್ಸಿ-ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಆಗ್ರಹ: ದಲಿತ ಸಂಘಟನೆಗಳಿಂದ ಜು.30 ರಂದು ವಿಧಾನಸೌಧ ಮುತ್ತಿಗೆ

ಬೆಂಗಳೂರು, ಜು.23: ಪರಿಶಿಷ್ಟ ಜಾತಿ ಮತ್ತು ಪಂಗಡದ ಸರಕಾರಿ ಅಧಿಕಾರಿಗಳ ಹಿಂಭಡ್ತಿ ಆದೇಶವನ್ನು ರದ್ದು ಮಾಡಬೇಕು ಹಾಗೂ ಭಡ್ತಿ ಮೀಸಲಾತಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಜು.30 ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಇಂದಿನ ಸಮ್ಮಿಶ್ರ ಸರಕಾರ ಎಸ್ಸಿ-ಎಸ್ಟಿ ಸಮುದಾಯದ ಭವಿಷ್ಯವನ್ನು ಹಾಳು ಮಾಡುವ ಹುನ್ನಾರ ಮಾಡುತ್ತಿದೆ. ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡು ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ನೌಕರರಿಗೆ ಹಿಂಭಡ್ತಿ ನೀಡುವ ಮೂಲಕ ದ್ರೋಹ ಬಗೆದಿದೆ ಎಂದು ದೂರಿದರು.
ರಾಜ್ಯ ಸರಕಾರವು ಸೂಕ್ತ ಮಾಹಿತಿ, ಅಂಕಿ, ಅಂಶಗಳನ್ನು ಸುಪ್ರೀಂಕೋರ್ಟ್‌ಗೆ ಒದಗಿಸದಿರುವ ಹಾಗೂ ಸಮರ್ಥವಾಗಿ ಸರಕಾರಿ ವಕೀಲರು ವಾದ ಮಂಡಿಸದಿರುವುದಿರಿಂದ ದಲಿತರಿಗೆ ಮಾರಕವಾಗುವ ತೀರ್ಪು ಬಂದಿದೆ. ಹಿಂದಿನ ಸರಕಾರ ಇದನ್ನು ವಿರೋಧಿಸಿ ಮಸೂದೆಯನ್ನು ಮಾಡಿದ್ದು, ಅದಕ್ಕೆ ರಾಷ್ಟ್ರಪತಿಯೂ ಅಂಕಿತನ ಹಾಕಿದ್ದಾರೆ. ಆದರೆ, ಇಂದಿನ ಸರಕಾರ ಭಡ್ತಿ ಮೀಸಲಾತಿ ಮಸೂದೆಯನ್ನು ಜಾರಿ ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ಸಚಿವರ ಮನೆಗಳಿಗೆ ಮುತ್ತಿಗೆ ಸೇರಿದಂತೆ ಹಲವು ಹಂತಗಳಲ್ಲಿ ಹೋರಾಟ ಮಾಡಿದ್ದರೂ, ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದಾಗಿ ಜು.27 ರಂದು ವಿಧಾನಸೌಧ ಕಡೆಗೆ ನಮ್ಮ ನಡಿಗೆ ಎಂಬ ಪಂಜಿನ ಮೆರವಣಿಗೆ ಹಾಗೂ ಜು.30 ರಂದು ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಸಮ್ಮಿಶ್ರ ಸರಕಾರದಲ್ಲಿನ ಹಲವಾರು ಸಚಿವರು ಭಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ನಾವು ಬದ್ಧರಾಗಿದ್ದೇವೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಜೆಡಿಎಸ್‌ನಲ್ಲಿ ಯಾರೊಬ್ಬರೂ ದಲಿತ ಸಚಿವರಿಲ್ಲ. ಬಿಎಸ್ಪಿಯಿಂದ ಆಯ್ಕೆಯಾಗಿ ಸಚಿವರಾಗಿರುವ ಮಹೇಶ್ ಜೆಡಿಎಸ್‌ನ ಹಂಗಿನಲ್ಲಿದ್ದಾರೆ. ಆದುದರಿಂದಾಗಿ, ಯಾರೂ ದಲಿತರ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಲಯನ್ ಬಾಲಕೃಷ್ಣ, ವೈ.ಎಸ್.ದೇವೂರ್, ಕೇಶವಮೂರ್ತಿ, ಡಾ.ಸಿ.ಎಸ್.ರಘು, ಆರ್.ಕೇಶವಮೂರ್ತಿ, ಬನಶಂಕರಿ ನಾಗು, ಎಂ.ಎಂ.ರಾಜು, ಡಾ.ಜಿ.ಗೋವಿಂದಯ್ಯ, ಎಂ.ಚಂದ್ರಪ್ಪ, ಜಿ.ಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







