ಮುಖ್ಯಮಂತ್ರಿಗೆ ಅಧಿಕಾರದ ಮದ ಏರಿದೆ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜು.24: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಿನ್ನೆ ಚನ್ನಪಟ್ಟಣದಲ್ಲಿ ಉತ್ತರ ಕರ್ನಾಟಕದ ಜನರ ಬಗ್ಗೆ ಆಡಿದ ಮಾತುಗಳು ಅವರು ಅಲಂಕರಿಸಿದ ಮುಖ್ಯಮಂತ್ರಿಯ ಪದವಿಗೆ ಅಪಮಾನ ಮಾಡುವಂತಹುದು ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ ಇಂತಹ ದುರಹಂಕಾರದ ಮತ್ತು ಅಪಮಾನಕರದ ಮಾತುಗಳನ್ನು ಆಡಿರಲಿಲ್ಲ. ಕುಮಾರಸ್ವಾಮಿ ಆಡಿದ ಒಂದೊಂದು ಮಾತು ಇಡೀ ರಾಜ್ಯದ ಜನ ಸಮೂಹಕ್ಕೆ ಅವಮಾನವಷ್ಟೇ ಅಲ್ಲ, ಜನರ ಮನಸ್ಸಿಗೆ ನೋವು ಮತ್ತು ಘಾಸಿ ಉಂಟು ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ತಮ್ಮ ಮನಸ್ಸಿನ ಹಿಡಿತ ಹಾಗೂ ಬುದ್ಧಿಯ ಸ್ಥಿಮಿತ ಕಳೆದು ಕೊಳ್ಳುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಬ್ಬ ಮುಖ್ಯಮಂತ್ರಿ ಈ ರೀತಿ ಸ್ವೇಚ್ಛಾಚಾರದ ಮಾತುಗಳನ್ನು ಆಡುವುದು ಇಡೀ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ. ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಬುದ್ಧಿ ಸ್ಥಿಮಿತವಿಲ್ಲದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಯಾವುದೇ ಭಾಗವಾಗಲಿ ಅಥವಾ ಜನರಾಗಲಿ ತಮಗೆ ಮತ ಹಾಕಿಲ್ಲ ಎಂದರೆ ಅವರು ಕೇಳುವ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ರಾಜ್ಯದ ಯಾವುದೇ ಭಾಗದ ಜನರಿಗೆ ಸರಕಾರವನ್ನು ಪ್ರಶ್ನೆ ಮಾಡುವ ಮತ್ತು ಕೇಳುವ ಹಕ್ಕು ಇದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ, ಕುಮಾರಸ್ವಾಮಿ, ಉತ್ತರ ಕರ್ನಾಟಕದ ರೈತರು ಅದರಲ್ಲೂ ಕೊಪ್ಪಳದ ರೈತರ ಹೋರಾಟದ ಬಗ್ಗೆ ಗಮನಸೆಳೆಯುತ್ತಾ ನೀವು ಮತ ಹಾಕುವಾಗ ನನ್ನ ಮುಖ ನೆನಪಾಗಲಿಲ್ಲವೇ, ನೀವು ಜಾತಿ ಮತ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ ಮತ ಚಲಾಯಿಸಿದ್ದೀರಿ, ಈಗ ನಿಮಗೆ ಸಾಲಮನ್ನಾ ಕೇಳುವ ಹಕ್ಕಿಲ್ಲ ಎಂದು ಹೇಳಿದ್ದು ಅವರ ಅಧಿಕಾರದ ಮದದ ಜೊತೆಗೆ ಅಹಂಕಾರದ ಪರಾಮಾವಧಿಯಾಗಿದೆ ಎಂದು ಯಡಿಯೂರಪ್ಪ ಕಿಡಿಗಾರಿದ್ದಾರೆ.
ಸರ್ವಾಧಿಕಾರಿ ಆಡಳಿತದಲ್ಲಿ ಈ ತರಹದ ದುರಹಂಕಾರದ ಮಾತುಗಳನ್ನು ಕೇಳಿದ್ದೇವೆ. ಆದರೆ ಇಂದಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ರೀತಿಯ ಮಾತುಗಳು ನಿರಂಕುಶತ್ವದ ಸಂಕೇತ ಮತ್ತು ಯಾವುದೇ ಒಬ್ಬ ಚುನಾಯಿತ ಮುಖ್ಯಮಂತ್ರಿ ಈ ರೀತಿ ಹೇಳಿದ್ದನ್ನು ಕೇಳಿಲ್ಲ ಮತ್ತು ನೋಡಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಇನ್ನೊಂದು ಕಡೆ ಮುಖ್ಯಮಂತ್ರಿ, ಈ ತರಹದ ಪ್ರಚೋದನಕಾರಿ ಹೇಳಿಕೆ ನೀಡಿ ಪ್ರತ್ಯೇಕ ರಾಜ್ಯದ ಕೂಗಿಗೆ ಪುಷ್ಟಿ ನೀಡಿ ಜನರನ್ನು ರೊಚ್ಚಿಗೇಳುವಂತೆ ಮಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಇರುವ ಪ್ರಬುದ್ಧ ರಾಜಕಾರಣಿಗಳು ಅದರಲ್ಲೂ ಕಾಂಗ್ರೆಸ್‌ನ ನಾಯಕರು ಕುಮಾರಸ್ವಾಮಿಯವರ ಈ ಸಂವಿಧಾನ ಮತ್ತು ಜನ ವಿರೋಧಿ ಹೇಳಿಕೆಗೆ ಉತ್ತರ ಕೊಡಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರ ನಡೆ ನುಡಿ ಮತ್ತು ಅವರ ಜನ ವಿರೋಧಿ ನೀತಿ ಬಗ್ಗೆ ನಮ್ಮ ಪಕ್ಷ ಹೋರಾಟ ರೂಪಿಸುವುದಲ್ಲದೇ ಇವರ ಸಂವಿಧಾನ ವಿರೋಧಿ ಹೇಳಿಕೆಗಳನ್ನು ರಾಜ್ಯಪಾಲರ ಮತ್ತು ರಾಷ್ಟ್ರಪತಿಗಳ ಗಮನಕ್ಕೆ ತರುತ್ತೇವೆ ಎಂದು ಯಡಿಯೂರಪ್ಪ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕುಮಾರಸ್ವಾಮಿ ರಾಜ್ಯದ ಜನತೆಗೆ ಸರಕಾರದ ಸೌಲಭ್ಯಗಳನ್ನು ಅವರ ಹಕ್ಕಿಗನುಗುಣವಾಗಿ ಕೊಡಬೇಕೆ ವಿನಃ ಯಾವುದೇ ಭಿಕ್ಷೆ ನೀಡುತ್ತಿಲ್ಲ. ರೈತರಾಗಲಿ, ಉತ್ತರಕರ್ನಾಟಕದ ಜನರಾಗಲಿ ಅಥವಾ ರಾಜ್ಯದ ಯಾವುದೇ ಜಿಲ್ಲೆಯ ಭಾಗದ ಅಥವಾ ಹಳ್ಳಿಯ ಜನರಾಗಲಿ ಕುಮಾರಸ್ವಾಮಿಯ ಹಂಗಿನಲ್ಲಿಲ್ಲ.
-ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ







