ಐಜಿಪಿಯಿಂದ ಶಿರೂರು ಎರಡೂ ಮಠಗಳಲ್ಲಿ ಪರಿಶೀಲನೆ
ಶಿರೂರು ಸ್ವಾಮೀಜಿ ನಿಗೂಢ ಸಾವು ಪ್ರಕರಣ

ಉಡುಪಿ, ಜು.24: ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಮಂಗಳವಾರ ಉಡುಪಿ ಎಸ್ಪಿ ಹಾಗೂ ಪ್ರಕರಣದ ತನಿಖಾ ತಂಡದ ಜೊತೆ ಹಿರಿಯಡ್ಕ ಸಮೀಪದ ಶಿರೂರಿನಲ್ಲಿರುವ ಮೂಲಮಠ ಹಾಗೂ ಉಡುಪಿ ರಥಬೀದಿಯಲ್ಲಿರುವ ಶಿರೂರು ಮಠಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಬೆಳಗ್ಗೆ ಉಡುಪಿ ಎಸ್ಪಿ ಕಚೇರಿಯಲ್ಲಿ ಪ್ರಕರಣದ ತನಿಖಾ ತಂಡದ ಜೊತೆ ತನಿಖೆಯ ಪ್ರಗತಿ ಪರಿಶೀಲನೆ ನಡೆಸಿದ ಐಜಿಪಿ, ತನಿಖೆಯ ಪ್ರಗತಿಯ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಅವರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಮುಂದೆ ತೆಗೆದುಕೊಳ್ಳ ಬೇಕಾದ ಹೆಜ್ಜೆಗಳ ಬಗ್ಗೆ ನಿರ್ದೇಶನ ನೀಡಿದರೆನ್ನಲಾಗಿದೆ.
ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಕುಮಾರ ಸ್ವಾಮಿ, ಕಾರ್ಕಳ ಪ್ರಭಾರ ಡಿವೈಎಸ್ಪಿ ಬೆಳ್ಳಿಯಪ್ಪ, ಪ್ರಕರಣದ ತನಿಖಾಧಿಕಾರಿಯಾಗಿರುವ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ವಿವಿಧ ತನಿಖಾ ತಂಡಗಳ ನೇತೃತ್ವ ವಹಿಸಿರುವ ಉಡುಪಿ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್, ಕಾಪು ವೃತ್ತ ನಿರೀಕ್ಷಕ ವಿ.ಎಸ್. ಹಾಲಮೂರ್ತಿ ರಾವ್, ಕೋಟ ಉಪನಿರೀಕ್ಷಕ ಸಂತೋಷ್ ಎ.ಕಾಯ್ಕಿಣಿ ಹಾಜರಿದ್ದರು.
ಮೂಲ ಮಠಕ್ಕೆ ಭೇಟಿ: ಎಸ್ಪಿ ಕಚೇರಿಯಿಂದ ನೇರ ಹಿರಿಯಡ್ಕ ಸಮೀಪದಲ್ಲಿರುವ ಶಿರೂರು ಮೂಲ ಮಠಕ್ಕೆ ತೆರಳಿದ ಐಜಿಪಿ ಅರುಣ್ ಚಕ್ರವರ್ತಿ ಮಧ್ಯಾಹ್ನ ವೇಳೆ ಇಡೀ ಮಠವನ್ನು ಪರಿಶೀಲಿಸಿದರು.
ಮೊದಲು ಶಿರೂರು ಸ್ವಾಮೀಜಿಯ ವೃಂದಾವನ ಕೋಣೆಗೆ ತೆರಳಿದ ಐಜಿಪಿ, ನಂತರ ಶಿರೂರು ಸ್ವಾಮೀಜಿ ವಾಸವಾಗಿದ್ದ ಮೇಲ್ಛಾವಣಿಯ ಕೋಣೆ ಹಾಗೂ ಅಡುಗೆ ಕೋಣೆಗಳು ಸೇರಿದಂತೆ ಇಡೀ ಮಠವನ್ನು ಪರಿಶೀಲನೆ ನಡೆಸಿದರು. ಅಲ್ಲದೆ ಸಿಸಿಕ್ಯಾಮೆರಾ ಹಾಗೂ ಡಿವಿಆರ್ ಬಗ್ಗೆಯೂ ಅವರು, ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಅವರಿಂದ ಮಾಹಿತಿ ಪಡೆದುಕೊಂಡರೆನ್ನಲಾಗಿದೆ.
ಸುಮಾರು ಒಂದೂವರೆ ಗಂಟೆಗಳ ಕಾಲ ಮೂಲಮಠದಲ್ಲಿದ್ದು ಮಾಹಿತಿ ಕಲೆ ಹಾಕಿದ ಐಜಿಪಿ, ನಂತರ ಎಸ್ಪಿ ಕಚೇರಿಗೆ ತೆರಳಿದರೆನ್ನಲಾಗಿದೆ. ಈ ಸಂದರ್ಭ ದಲ್ಲಿ ಐಜಿಪಿ ಜೊತೆ ಪ್ರಕರಣದ ತನಿಖಾ ತಂಡಗಳ ನೇತೃತ್ವ ವಹಿಸಿದ ಅಧಿಕಾರಿಗಳಿದ್ದರು.
ಉಡುಪಿ ಮಠದಲ್ಲೂ ಪರಿಶೀಲನೆ: ಬಳಿಕ ಉಡುಪಿ ರಥಬೀದಿಯಲ್ಲಿರುವ ಶಿರೂರು ಮಠಕ್ಕೆ ಸಂಜೆ ವೇಳೆ ಆಗಮಿಸಿದ ಐಜಿಪಿ ಅರುಣ್ ಚಕ್ರರ್ತಿ ಇಡೀ ಮಠವನ್ನು ಜಾಲಾಡಿದರು.
ಕೆಳಗಿನ ಎಲ್ಲ ಕೋಣೆಗಳಿಗೆ ತೆರಳಿದ ಅವರು, ನಂತರ ಮೊದಲ ಮಹಡಿಗೆ ತೆರಳುವ ಬಾಗಿಲಿನ ಬೀಗ ತೆಗೆಸಿ ಅಲ್ಲಿರುವ ಶಿರೂರು ಸ್ವಾಮೀಜಿಯ ಕೋಣೆ ಸೇರಿದಂತೆ ಇಡೀ ಮಠವನ್ನು ಸುತ್ತಾಡಿದರು. ಮಠದ ಮುಂದಿನ ಹಾಗೂ ಹಿಂದಿನ ಬಾಗಿಲಿನಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮಠದೊಳಗೆ ಇತರರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಈ ವೇಳೆ ಐಜಿಪಿ ಮಠಕ್ಕೆ ಸಂಬಂಧಿಸಿದಂತೆ ಯಾರನ್ನು ಕೂಡ ವಿಚಾರಣೆ ಮಾಡಿಲ್ಲ ಎನ್ನಲಾಗಿದೆ. ಇಂದು ಮಠದ ಎದುರು ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿತ್ತು.
ಮಠದೊಳಗೆ ತನಿಖೆಗೆ ಸಂಬಂಧಿಸಿದಂತೆ ಯಾವುದಾದರೂ ವಸ್ತುಗಳು ಪತ್ತೆಯಾಗಿವೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐಜಿಪಿ, ಯಾವುದೇ ವಸ್ತುಗಳು ಸಿಕ್ಕಿಲ್ಲ ಎಂದರು. ಉಳಿದಂತೆ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ತೆರಳಿದರು.







