ಬೆಂಗಳೂರು: ಸಿಪಿಎಂ ಕಾರ್ಯಕರ್ತರ ಮೇಲಿನ ದಾಳಿ ಖಂಡಿಸಿ ಧರಣಿ

ಬೆಂಗಳೂರು, ಜು.24: ತ್ರಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಂಘಪರಿವಾರ ಮತ್ತು ಟಿಎಂಸಿ ಕಾರ್ಯಕರ್ತರು ನಡೆಸುತ್ತಿರುವ ರಾಜಕೀಯ ದಾಳಿಯನ್ನು ಖಂಡಿಸಿ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿಂದು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಸಿಪಿಎಂ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಆರ್.ಶ್ರೀನಿವಾಸ್, ತ್ರಿಪುರದಲ್ಲಿ ಬಿಜೆಪಿ ನೇತೃತ್ವದ ಸರಕಾರವು ಅಧಿಕಾರ ಹಿಡಿದ ನಂತರ ನಿರಂತರವಾಗಿ ಸಿಪಿಎಂ ಹಾಗೂ ಅದರ ಸಾಮೂಹಿಕ ಸಂಘಟನೆಗಳ ಸದಸ್ಯರ ಮೇಲೆ ಆರೆಸ್ಸೆಸ್ ಹಾಗೂ ಸಂಘಪರಿವಾರದ ಕಾರ್ಯಕರ್ತರು ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು.
ತ್ರಿಪುರದಲ್ಲಿ ಇದುವರೆಗೂ ನೂರಕ್ಕಿಂತ ಅಧಿಕ ಪಕ್ಷದ ಹಾಗೂ ಸಾಮೂಹಿಕ ಸಂಘಟನೆಗಳ ಕಚೇರಿಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಲಾಗಿದೆ. ಬಲವಂತವಾಗಿ ಕಚೇರಿಗಳನ್ನು ಆಕ್ರಮಿಸಿಕೊಳ್ಳಲಾಗಿದೆ. ಕಾರ್ಯಕ್ರಮಗಳ ಮೇಲೆ ದಾಳಿ ನಡೆಸಿ, ಬೆದರಿಕೆ ಒಡ್ಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಯಾದ ಮಾಣಿಕ್ ಸರ್ಕಾರ್‌ರನ್ನು ಸಂಕಷ್ಟ ಪೀಡಿತ ಬುಡಕಟ್ಟು ಪ್ರದೇಶಗಳಿಗೆ ಭೇಟಿ ನೀಡದಂತೆ ಅಡ್ಡಿ ಪಡಿಸಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ವಾಧಿಕಾರಿ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು, ಅಲ್ಲಿನ ಸಿಪಿಎಂ ಕಾರ್ಯಕರ್ತರ ಮೇಲೆ ನಿರಂತರವಾಗಿ ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದ್ದಾರೆ. ಇತ್ತೀಚಿಗೆ ನಡೆದ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ರಿಗ್ಗಿಂಗ್ ಹಾಗೂ ಮತಗಟ್ಟೆಗಳನ್ನು ವಶಪಡಿಸಿಕೊಂಡು ಹಿಂಸಾತ್ಮಕ ದಾಳಿ ನಡೆಸಿದ್ದಾರೆ. ಅಲ್ಲದೆ, ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು, ಅಭ್ಯರ್ಥಿಗಳನ್ನು, ಕುಟುಂಬದ ಸದಸ್ಯರನ್ನು ಗುರಿಯಾಗಿಸಿಕೊಂಡು ಮಾರಾಣಾಂತಿಕ ಹಲ್ಲೆ ನಡೆಸಿ 10 ಜನ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಪಾಯಕಾರಿ ಸ್ಥಿತಿಯಲ್ಲಿ ಸಾರ್ವಜನಿಕರು ಜೀವಿಸುವಂತಾಗಿದೆ. ದಲಿತರು, ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲದಂತಾಗಿದೆ. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಗ್ಗೂಲೆ ಮಾಡಲಾಗುತ್ತಿದೆ. ಸಾಂವಿಧಾನಿಕ ಆಶಯಗಳನ್ನು ನೆಲಸಮ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ದೇಶದಾದ್ಯಂತ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಪ್ರದರ್ಶನಕ್ಕೆ ಕರೆ ನೀಡಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಮುಖಂಡರಾದ ಗೋಪಾಲಕೃಷ್ಣ ಅರಳಹಳ್ಳಿ, ಶಾರದಾ, ನಾಗರಾಜ್, ಗೌರಮ್ಮ, ವೌನ ಹೋರಾಟಗಾರ ಅಂಬ್ರೋಸ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







