‘ಮಲ್ಪೆ ಕೇಂದ್ರೀಯ ವಿದ್ಯಾಲಯ ಸ್ಥಳಾಂತರಕ್ಕೆ ಪ್ರಯತ್ನ’
ವಿದ್ಯಾರ್ಥಿ ಪೋಷಕರಿಗೆ ಶಾಸಕರ ಭರವಸೆ

ಮಲ್ಪೆ, ಜು.24: ಮಲ್ಪೆ ವಡಬಾಂಡೇಶ್ವರದಲ್ಲಿರುವ ಕೇಂದ್ರೀಯ ವಿದ್ಯಾಲಯವನ್ನು ಮಣಿಪಾಲದ ಪ್ರಗತಿ ನಗರದಲ್ಲಿರುವ ಡಯಟ್ ಕಟ್ಟಡಕ್ಕೆ ಸ್ಥಳಾಂತರಿಸಲು ಪ್ರಯತ್ನ ನಡೆಸುವುದಾಗಿ ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ವಡಬಾಂಡೇಶ್ವರದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಇಂದು ವಿದ್ಯಾರ್ಥಿಗಳ ಪೋಷಕರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಕೇಂದ್ರೀಯ ವಿದ್ಯಾಲಯ ಪೋಷಕರ ಸಂಘಕ್ಕೆ ಈ ಭರವಸೆಯ್ನು ನೀಡಿದ್ದಾರೆ. ಸಂಸ್ಥೆ ಆರಂಭವಾಗಿ ಮೂರು ವರ್ಷವಾದರೂ ಇನ್ನೂ ಪ್ರಗತಿ ನಗರದಲ್ಲಿ ಕಟ್ಟಡ ಕಾರ್ಯ ಆರಂಭವಾಗಿಲ್ಲ. ಪ್ರಸ್ತುತ ಮಲ್ಪೆಯಲ್ಲಿರುವ ಕಟ್ಟಡದಲ್ಲಿ ಮೂಲ ಸೌಕರ್ಯಗಳು ಇಲ್ಲದಿರುವುದರತ್ತ ಪೋಷಕರು ಶಾಸಕರ ಗಮನ ಸೆಳೆದರು.
ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯದ ಪರಿಸ್ಥಿತಿ ಶೋಚನೀಯವಾಗಿದೆ. ಪ್ರಗತಿ ನಗರದಲ್ಲಿ ಮಂಜೂರಾಗಿರುವ 10 ಎಕರೆ ಜಾಗದಲ್ಲಿ ಹೊಸ ಕಟ್ಟಡ ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ. ಈ ಬಗ್ಗೆ ಪೋಷಕರ ಸಮಿತಿ, ಕೇಂದ್ರೀಯ ವಿದ್ಯಾಲಯ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿದ್ದು, ಇದರ ಪ್ರತಿಗಳನ್ನು ಪ್ರಧಾನಿ ಕಚೇರಿ, ಸಚಿವರಾದ ಪ್ರಕಾಶ್ ಜಾವ್ಡೇಕರ್ ಹಾಗೂ ಕೇಂದ್ರೀಯ ವಿದ್ಯಾಲ ಸಂಘಟನೆಗೂ ಕಳುಹಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಭಟ್, ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮತ್ತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಪ್ರಗತಿ ನಗರದಲ್ಲಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪೋಷಕರ ಸಂಘದ ಅಧ್ಯಕ್ಷ ಗಿರೀಶ್ ಹಾಗೂ ವಿವಿಧ ಪದಾಧಿಕಾರಿಗಳು, ಕೇಂದ್ರದ ಪ್ರಭಾರ ಪ್ರಾಂಶುಪಾಲ ಬಿಜು ಉಪಸ್ಥಿತರಿದ್ದರು.







