ಲೋಕಪಾಲ್ ಮಸೂದೆ: ಕೇಂದ್ರದ ಪ್ರತಿಕ್ರಿಯೆಗೆ ಸುಪ್ರೀಂ ಅತೃಪ್ತಿ

ಹೊಸದಿಲ್ಲಿ, ಜು. 24: ಲೋಕಪಾಲ್‌ಗೆ ಶೋಧ ಸಮಿತಿ ನಿಯೋಜಿಸಿದ ಕುರಿತು ಕೇಂದ್ರದ ಪ್ರತಿಕ್ರಿಯೆ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಅತೃಪ್ತಿ ವ್ಯಕ್ತಪಡಿಸಿದೆ. ಶೋಧ ಸಮಿತಿ ಬಗ್ಗೆ ಅವಶ್ಯಕ ವಿವರಗಳನ್ನು ನೀಡುವ ಹೊಸ ಅಫಿದಾವಿತ್ ದಾಖಲಿಸುವಂತೆ ನ್ಯಾಯಮೂರ್ತಿ ರಂಜನ್ ಗಗೋಯ್, ಆರ್. ಬಾನುಮತಿ ಹಾಗೂ ನವೀನ್ ಸಿನ್ಹಾ ಅವರನ್ನು ಒಳಗೊಂಡ ಪೀಠ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.
ವಿಚಾರಣೆ ಸಂದರ್ಭ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅಫಿದಾವಿತ್ ಸಲ್ಲಿಸಿದ್ದಾರೆ ಹಾಗೂ ಆಯ್ಕೆ ಸಮಿತಿಯ ಸಭೆ ನಡೆಸಲಾಗಿದೆ ಆದರೆ, ಶೋಧ ಸಮಿತಿಯ ಹೆಸರುಗಳನ್ನು ಅಂತಿಮಗೊಳಿಸಿಲ್ಲ ಎಂದು ಅವರು ಹೇಳಿದ್ದಾರೆ. ಇಂತಹ ನೇಮಕಾತಿಗೆ ಕಾನೂನಿನ ನಿಯಮಗಳನ್ನು ಗಮನದಲ್ಲಿ ಇರಿಸಿ ಶೋಧ ಸಮಿತಿಗೆ ಸದಸ್ಯರನ್ನು ನಿಯೋಜಿಸಲು ಶೀಘ್ರದಲ್ಲಿ ಇನ್ನೊಂದು ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸರಕಾರೇತರ ಸಂಸ್ಥೆ ಕಾಮನ್ ಕಾಸ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ನ್ಯಾಯವಾದಿ ಪ್ರಶಾಂತ್ ಭೂಷಣ್, ಮುಂದಿನ ಸಭೆಯನ್ನು ಕೇಂದ್ರ ಸರಕಾರ ಖಚಿತಗೊಳಿಸಿಲ್ಲ ಹಾಗೂ ಐದು ವರ್ಷಗಳ ಹಿಂದೆಯೇ ಕಾನೂನಿಗೆ ಅಂಗೀಕಾರದ ನೀಡಿದ ಹೊರತಾಗಿಯೂ ಕೇಂದ್ರ ಸರಕಾರ ನೇಮಕಾತಿ ವಿಳಂಬ ಮಾಡುತ್ತಿದೆ ಎಂದು ಹೇಳಿದ್ದಾರೆ.





