ದೇಶದ್ರೋಹದ ವಿವಾದ: ಉಮರ್ ಖಾಲಿದ್ ಪಿಎಚ್‌ಡಿ ಸ್ವೀಕರಿಸಲು ನಿರಾಕರಿಸಿದ ಜೆಎನ್‌ಯು

ಹೊಸದಿಲ್ಲಿ, ಜು. 24: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ 2016 ಫೆಬ್ರವರಿ 9ರಂದು ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿರುವ ಆರೋಪದಲ್ಲಿ ಶಿಕ್ಷೆಗೊಳಗಾದ ಹಿನ್ನೆಲೆಯಲ್ಲಿ ಉಮರ್ ಖಾಲಿದ್ ಹಾಗೂ ಇನ್ನೊಬ್ಬ ವಿದ್ಯಾರ್ಥಿಯ ಪಿಎಚ್‌ಡಿಯನ್ನು ಸ್ವೀಕರಿಸಲು ಜೆಎನ್‌ಯು ಆಡಳಿತ ಸೋಮವಾರ ನಿರಾಕರಿಸಿದೆ.
ಎಂಫಿಲ್ ಹಾಗೂ ಪಿಎಚ್‌ಡಿ ಸಲ್ಲಿಸಲು ಜುಲೈ 23 ಕೊನೆಯ ದಿನವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ನೀಡಲಾದ ಶಿಕ್ಷೆಯನ್ನು ಮರು ಪರಿಶೀಲಿಸಲು ರೂಪಿಸಲಾದ ಆಡಳಿತದ ಮೇಲ್ಮನವಿ ಸಮಿತಿ ಕನ್ಹಯ್ಯ ಕುಮಾರ್ ಹಾಗೂ ಇತರರೊಂದಿಗೆ ಉಮರ್ ಖಾಲಿದ್‌ಗೆ ಇತ್ತೀಚೆಗೆ ದಂಡ ವಿಧಿಸಿತ್ತು. ಕೊನೆಯ ಸೆಮಿಸ್ಟರ್ ಆಗಿದ್ದರೂ ಮುಂದಿನ ಸೆಮಿಸ್ಟರ್‌ನಿಂದ ಖಾಲಿದ್ ಅವರನ್ನು ಉಚ್ಛಾಟಿಸಲಾಗಿತ್ತು. ಕುಮಾರ್ ಕುರಿತು ಜೆಎನ್‌ಯು ನೀಡಿದ್ದ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಳ್ಳಿ ಹಾಕಿತ್ತು ಹಾಗೂ ಇದನ್ನು ‘‘ಕಾನೂನುಬಾಹಿರ ಕೃತ್ಯ, ಅವೈಚಾರಿಕತೆ ಹಾಗೂ ಕಾರ್ಯವಿಧಾನದ ಅನೌಚಿತ್ಯದಿಂದ ಬಳಲಿದೆ’’ ಎಂದು ವ್ಯಾಖ್ಯಾನಿಸಿತ್ತು. ಇದರ ಪರಿಣಾಮ ಕನ್ಹಯ್ಯ ಕುಮಾರ್‌ಗೆ ಸೋಮವಾರ ಪ್ರೌಢ ಪ್ರಬಂಧ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್, ಆಗಸ್ಟ್ 16ರಂದು ಮುಂದಿನ ವಿಚಾರಣೆ ನಡೆಯುವವರೆಗೆ ಖಾಲಿದ್ ವಿರುದ್ಧ ಯಾವುದೇ ಒತ್ತಾಯದ ಕ್ರಮಗಳನ್ನು ತೆಗೆದುಕೊಳ್ಳಬೇಡಿ ಎಂದು ಜೆಎನ್‌ಯುಗೆ ಸೂಚಿಸಿದ್ದರು.
‘‘ನಾವು ದಂಡ ಕಟ್ಟಿಲ್ಲ. ನಾವು ಈಗಾಗಲೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದೆವು. ಆದರೆ, ಬಲವಂತ ಮಾಡಬಾರದು ಎಂಬ ಆದೇಶವನ್ನು ಜೆಎನ್‌ಯು ಅನುಸರಿಸುತ್ತಿಲ್ಲ ಎಂದು ನಾವು ಮತ್ತೊಮ್ಮೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದೆವು. ಆದೇಶ ಅನುಸರಣೆ ಮಾಡುವಂತೆ ನ್ಯಾಯಾಲಯ ಮತ್ತೊಮ್ಮೆ ಹೇಳಿತ್ತು. ಆದರೆ, ನಾನು ಜೆಎನ್‌ಯುಗೆ ಬಂದಾಗ, ವಿ.ವಿ.ಯ ವಿದ್ಯಾರ್ಥಿ ಮೇಲ್ವಿಚಾರಕ ಅಧಿಕಾರಿ ಪ್ರೌಢ ಪ್ರಬಂಧ ಸ್ವೀಕರಿಸಲು ನಿರಾಕರಿಸಿದರು ಹಾಗೂ ಇದು ಬಲವಂತವಲ್ಲ ಎಂದು ವಾದಿಸಿದ್ದರು. ಇದು ಇನ್ನೊಂದು ರೀತಿಯ ದ್ವೇಷ. ನಾನು ಖಂಡಿತವಾಗಿ ದಂಡ ಪಾವತಿಸುವುದಿಲ್ಲ.’’
ಉಮ್ಮರ್ ಖಾಲಿದ್







