ಮಾಜಿ ಸ್ಪೀಕರ್ ಖಾಸಗಿ ನಿವಾಸದಲ್ಲಿ ಸರಕಾರದ ಪೀಠೋಪಕರಣಗಳು: ಹಿಂದಿರುಗಿಸಲು ಸರಕಾರ ಸೂಚನೆ

ಬೆಂಗಳೂರು, ಜು.24: ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮನೆಯಲ್ಲಿರುವ ವಿಧಾನಸಭೆ ಸಚಿವಾಲಯದ ಪೀಠೋಪಕರಣಗಳನ್ನು ಹಿಂದಿರುಗಿಸುವಂತೆ ಸರಕಾರ ಸೂಚನೆ ನೀಡಿದೆ.
ವಿಧಾನಸೌಧದ ಪಡಸಾಲೆಯಲ್ಲಿರಬೇಕಾದ ಪೀಠೋಪಕರಣಗಳು ಕೋಳಿವಾಡ ಅವರ ಮನೆಯಲ್ಲಿರುವ ಕುರಿತು ಖಾಸಗಿ ಸುದ್ದಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ, ಕೋಳಿವಾಡಗೆ ಪತ್ರ ಬರೆದು ಪೀಠೋಪಕರಣಗಳನ್ನು ಹಿಂದಿರುಗಿಸುವಂತೆ ತಿಳಿಸಿದ್ದಾರೆ.
ಕಿಂಗ್ ಸೈಜ್ ಮಂಚ, ಇಟಾಲಿಯನ್ ಸೋಫಾ, ಮಸಾಜ್ ಚೇರ್ ಹಾಗೂ ಪಾರಿವಾಳದ ಬಾಕ್ಸ್ ಸೇರಿದಂತೆ 7 ವಸ್ತುಗಳನ್ನು ವಿಧಾನಸಭೆ ಸಚಿವಾಲಯಕ್ಕೆ ಹಿಂದಿರುಗಿಸುವಂತೆ ತಿಳಿಸಿದ್ದಾರೆ. ಆದರೆ, ಇದಕ್ಕೆ ಪ್ರತ್ಯುತ್ತರ ನೀಡಿ ಕೋಳಿವಾಡ, ಬರೆದಿರುವ ಪತ್ರದಲ್ಲಿ ಆ ವಸ್ತುಗಳ ಬದಲು ಹಣ ಕೊಡುವುದಾಗಿ ತಿಳಿಸಿದ್ದಾರೆ.
ಕೋಳಿವಾಡ ಸ್ಪೀಕರ್ ಆಗಿದ್ದಾಗ ಖರೀದಿಸಿದ್ದ ವಸ್ತುಗಳನ್ನು ತಮ್ಮ ಖಾಸಗಿ ನಿವಾಸಕ್ಕೆ ಹೊತ್ತೊಯ್ದಿದ್ದಾರೆ ಎನ್ನಲಾಗುತ್ತಿದ್ದು, ಅವರ ನಿವಾಸದಲ್ಲಿರುವ ಪೀಠೋಪಕರಣಗಳ ಮೇಲೆ ಕೆಎಲ್‌ಎಎಸ್/ಎಲ್‌ಎಚ್/5ಕೆ ಎಂದು ನಮೂದು ಮಾಡಲಾಗಿದೆ.





