ಜು.30 ರೊಳಗೆ ಹೇಮಾವತಿ ಅಚ್ಚುಕಟ್ಟು ನಾಲೆಗಳಿಗೆ ನೀರು: ಎಚ್.ಡಿ.ರೇವಣ್ಣ

ಬೆಂಗಳೂರು, ಜು.24: ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಜು.30ರೊಳಗೆ ನೀರು ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಪಾಂಡವಪುರ, ಕೆ.ಆರ್.ಪೇಟೆ ಸೇರಿದಂತೆ ಸುತ್ತಮುತ್ತಲ ನಾಲೆಗಳಲ್ಲಿ ನೀರು ಹರಿಸುವುದರ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿ.ಎಸ್.ಪುಟ್ಟರಾಜುರೊಂದಿಗೆ ಚರ್ಚಿಸಲಾಗಿದ್ದು, ಜು.30ರೊಳಗೆ ಇಲ್ಲಿನ ಎಲ್ಲ ನಾಲೆಗಳಲ್ಲೂ ನೀರು ಹರಿಸಬೇಕಾದ ಹಿನ್ನೆಲೆಯಲ್ಲಿ, ನಾಲೆಗಳ ದುರಸ್ಥಿ ಕಾಮಗಾರಿಗಳನ್ನು ಶೀಘ್ರವೆ ಮುಗಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇನ್ನು ನನಗೆ ನಿಯೋಜಿಸಿರುವ ಸರಕಾರಿ ಬಂಗಲೆಯ ನವೀಕರಣಕ್ಕೆ ಕೋಟ್ಯಂತರ ರೂ.ವೆಚ್ಚ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಈ ಬಂಗಲೆ ದುರಸ್ಥಿ ಕಾಮಗಾರಿಯು ಮಾಜಿ ಸಚಿವ ಮಹದೇವಪ್ಪ ಅವಧಿಯಲ್ಲಿಯೆ ಪ್ರಾರಂಭಗೊಂಡಿತ್ತು. ಆ ಬಂಗಲೆಯ ಒಳಗೆ ನಾನಿನ್ನು ಪ್ರವೇಶವೆ ಮಾಡಿಲ್ಲ. ಅಷ್ಟರಲ್ಲೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳು ಕೇಳಿ ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆಗೆ ಕೋಟ್ಯಂತರ ರೂ. ಅವ್ಯವಹಾರ ನಡೆಯುತ್ತಿದೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಈ ರೀತಿಯ ಯಾವುದೆ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಈ ವರದಿ ಸತ್ಯಕ್ಕೆ ದೂರವಾದದ್ದು.
-ಎಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವ







