ಉಡುಪಿ: ಸೇವೆಯಿಂದ ಅಬಕಾರಿ ಅಧಿಕಾರಿ ಅಮಾನತು

ಉಡುಪಿ, ಜು. 24: ತನ್ನ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಆರೋಪದ ಮೇಲೆ ಉಡುಪಿ ಜಿಲ್ಲೆಯ ಅಬಕಾರಿ ಇಲಾಖೆಯ ಅಬಕಾರಿ ಉಪಾಧೀಕ್ಷಕರಾಗಿದ್ದ ಕೆ. ವಿನೋದ್ ಕುಮಾರ್‌ರನ್ನು ಅಬಕಾರಿ ಆಯುಕ್ತ ಮತ್ತು ಶಿಸ್ತು ಪ್ರಾಧಿಕಾರಿ ವಿ. ಯಶವಂತ್ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ವಿಚಾರಣೆಗೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಆ ಅಮಾನತು ಆದೇಶ ನಿಯಮ 10(5)(ಎ)ರ ನಿಯಮದನ್ವಯ ಸಕ್ಷಮ ಪ್ರಾಧಿಕಾರಿಯು ಮಾರ್ಪಾಡುಗೊಳಿಸಲು ಅಥವಾ ಹಿಂತೆಗೆದುಕೊಳ್ಳುವವರೆಗೆ ಜಾರಿಯಲ್ಲಿರುತ್ತದೆ. ಅಮಾನತ್ತು ಅವಧಿಯಲ್ಲಿ ಇವರಿಗೆ ಕರ್ನಾಟಕ ಸರಕಾರಿ ಸೇವಾ ನಿಯಮಾವಳಿಯ ನಿಯಮ 98ರನ್ವಯ ಜೀವನಾಧಾರ ಭತ್ಯೆಯನ್ನು ನೀಡಬೇಕು ಹಾಗೂ ಅಮಾನತ್ತಿನ ಅವಧಿಯಲ್ಲಿ ಅವರು ಸಕ್ಷಮ ಪ್ರಾಧಿಕಾರಿ ಪೂರ್ವಾನುಮತಿ ಪಡೆಯದೇ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದವರು ಆದೇಶದಲ್ಲಿ ತಿಳಿಸಿದ್ದಾರೆ.
ವಿನೋದ್ ಕುಮಾರ್ ಅವರು ತನ್ನ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಆರೋಪದ ಮೇರೆಗೆ ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ ಕಳೆದ ಜ.8ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು.
ತನಿಖೆಯ ಅವಧಿಯಲ್ಲಿ ಜ. 9ರಂದು ಇವರ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿ ಶೋಧಿಸಲಾಗಿದ್ದು, ಈ ವೇಳೆ ವಶಪಡಿಸಿಕೊಳ್ಳಲಾದ ದಾಖಲಾತಿಗಳು ಹಾಗೂ ಈವರೆಗೆ ಕೈಗೊಳ್ಳಲಾದ ಪ್ರಾಥಮಿಕ ತನಿಖೆಯಿಂದ ಆರೋಪಿ ಸರಕಾರಿ ನೌಕರರಾದ ಕೆ.ವಿನೋದ್ ಕುಮಾರ್ ಒಟ್ಟು 1,58,97,943 ರೂ. ಸ್ಥಿರಾಸ್ಥಿ, ಚರಾಸ್ಥಿಯನ್ನು ಹೊಂದಿರುವುದು ಪತ್ತೆಯಾಗಿತ್ತು.
ವಿನೋದ್ ಕುಮಾರ್ ಅವರು ಸೇವಾವಧಿಯಲ್ಲಿ ಮಾಡಿದ ಖರ್ಚು ಹಾಗೂ ಬಲ್ಲ ಮೂಲಗಳಿಂದ ಗಳಿಸಿದ ಒಟ್ಟು ಆಸ್ತಿಯನ್ನು ಕಡಿತಗೊಳಿಸಿದಾಗ ಅವರು 90,97,000 ರೂ. ಹೆಚ್ಚುವರಿ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದ್ದು, ಇದು ಆರೋಪಿಯ ಆದಾಯಕ್ಕಿಂತ ಶೇ.133.79ರಷ್ಟು ಅಧಿಕ ಎಂದು ತನಿಖೆಯಿಂದ ಗೊತ್ತಾಗಿದೆ.
2008 ಆ. 26ರ ರಾಜ್ಯ ಸರಕಾರದ ಅಧಿಸೂಚನೆಯಂತೆ ಸರಕಾರಿ ಅಧಿಕಾರಿಗಳು, ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾದಲ್ಲಿ ಅಂತಹ ಸರಕಾರಿ ನೌಕರರನ್ನು ಅಮಾನತ್ತಿನಲ್ಲಿಡಲು ಅವಕಾಶವಿದೆ. ಕೆ.ವಿನೋದ್ ಕುಮಾರ್ ತನ್ನ ನಿಗದಿತ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿಯನ್ನು ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಹಾಗೂ ಹುದ್ದೆಯಲ್ಲಿ ಮುಂದುವರಿದರೆ ಮುಂದಿನ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಸಾಕ್ಷ್ಯ ನಾಶಪಡಿಸುವ ಇಲ್ಲವೇ ತಿರುಚುವ, ಬೆದರಿಕೆ ಒಡ್ಡುವ ಸಾದ್ಯತೆಯ ಹಿನ್ನಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತಿನಲ್ಲಿಡಲು ನಿರ್ಧರಿಸಲಾಗಿದೆ.







