‘ಉತ್ಕೃಷ್ಟ ಶಿಕ್ಷಣ ಸಂಸ್ಥೆ’ ಸಂಭ್ರಮಾಚರಣೆಯಲ್ಲಿ ಡಾ.ವಿನೋದ್ ಭಟ್
ಶೀಘ್ರವೇ ಬೆಂಗಳೂರು, ಶ್ರೀಲಂಕಾದಲ್ಲಿ ಮಾಹೆ ಕ್ಯಾಂಪಸ್

ಮಣಿಪಾಲ, ಜು.24: ಕೇಂದ್ರ ಸರಕಾರದಿಂದ ದೇಶದ ‘ಉತ್ಕೃಷ್ಟ ಶಿಕ್ಷಣ ಸಂಸ್ಥೆ’ (ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್) ಮಾನ್ಯತೆಯನ್ನು ಪಡೆದಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರು, ಜೆಮ್‌ಷೆದ್‌ಪುರ ಹಾಗೂ ಶ್ರೀಲಂಕಾಗಳಲ್ಲಿ ಒಟ್ಟು ಮೂರು ಹೊಸ ಕ್ಯಾಂಪಸ್‌ಗಳನ್ನು ತೆರೆಯುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ಮಾಹೆ ಕುಲಪತಿ ಡಾ.ವಿನೋದ್ ಭಟ್ ತಿಳಿಸಿದ್ದಾರೆ.
ಮಾಹೆಗೆ ಐಒಇ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನಲ್ಲಿ ನಡೆದ ಸಂತೋಷ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಮಾಹೆ ಸಾಧನೆಯ ಸಂಪೂರ್ಣ ಶ್ರೇಯಸ್ಸನ್ನು ಸ್ಥಾಪಕ ಡಾ.ಟಿ.ಎಂ.ಎ.ಪೈ ಹಾಗೂ ಮಾಹೆ ಚಾನ್ಸಲರ್ ಡಾ.ರಾಮದಾಸ ಪೈ ಅವರಿಗೆ ಅರ್ಪಿಸಿದ ಡಾ. ವಿನೋದ್ ಭಟ್, ಡಾ.ಟಿಎಂಎ ಪೈ ಹಾಗೂ ಡಾ.ರಾಮದಾಸ ಪೈ ಅವರು ಎದುರಿಸಿದ ಕಷ್ಟ, ಸಂಕಷ್ಟಗಳನ್ನು ನೆನಪಿಸಿಕೊಂಡು, ಅವರ ಅವಿರತ ಪ್ರಯತ್ನ ದಿಂದಾಗಿ ಸಂಸ್ಥೆ ಇಂದು ಇಂಥ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಮಾಹೆಯ ಕಳೆದ 25 ವರ್ಷಗಳ ನಿರಂತರ ಸಾಧನೆಗೆ ಸಂದ ಗೌರವ ಹಾಗೂ ಭವಿಷ್ಯದಲ್ಲಿ ವಿಶ್ವದ ಅಗ್ರ ರ್ಯಾಂಕಿಂಗ್ ವಿವಿಗಳಲ್ಲಿ ಒಂದಾಗುವ ಸಾಧ್ಯತೆಗೆ ನೀಡಿದ ಪ್ರೋತ್ಸಾಹವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಈ ದಿಶೆಯಲ್ಲಿ ನಾವು ಸಾಗಿರುವುದು ಸ್ವಲ್ಪ ದೂರವನ್ನು. ಸಂಶೋಧನೆ, ಶೈಕ್ಷಣಿಕ ಉನ್ನತಿ, ದಕ್ಷ ಆಡಳಿತ, ವಿದ್ಯಾರ್ಥಿಗಳು ಹಾಗೂ ಉತ್ತಮ ಪ್ರಾಧ್ಯಾಪಕರ ಮೂಲಕ ಇನ್ನಷ್ಟನ್ನು ನಾವು ಸಾಧಿಸಬೇಕಾಗಿದೆ. ಗುಣಮಟ್ಟದ ಶಿಕ್ಷಣ ನಮ್ಮ ಪ್ರಧಾನ ಲಕ್ಷವಾಗಿರಬೇಕು ಎಂದವರು ನುಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಡಾ.ವಿನೋದ್ ಭಟ್ ತನ್ನ ತಂಡಕ್ಕೆ ನೀಡಿದ ಸಮರ್ಥ ಮುಂದಾಳತ್ವದಲ್ಲಿ ಮಾಹೆ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ ಎಂದರು.
ಮಾಹೆಯ ಗುಣಮಟ್ಟ ಹಾಗೂ ಅಂಗೀಕಾರ ವಿಭಾಗದ ನಿರ್ದೇಶಕ ಡಾ.ಸಂದೀಪ್ ಶೆಣೈ ಅವರು ದೇಶದ ಮೂರು ಸರಕಾರಿ ಹಾಗೂ ಮೂರು ಖಾಸಗಿ ವಿದ್ಯಾ ಸಂಸ್ಥೆಗಳು ಮಾತ್ರ ಪಡೆಯಲು ಸಾಧ್ಯವಾದ ಐಒಇ ಮಾನ್ಯತೆಯನ್ನು ಮಾಹೆ ಪಡೆದ ಕುರಿತು ವಿವರಗಳನ್ನು ನೀಡಿದರು. ದೇಶದಲ್ಲಿ ಆಯ್ಕೆಯಾದ ಆರು ಸಂಸ್ಥೆಗಳಲ್ಲಿ ತಲಾ ಒಂದು ಸರಕಾರಿ (ಬೆಂಗಳೂರಿನ ಐಐಎಸ್ಸಿ) ಹಾಗೂ ಒಂದು ಖಾಸಗಿ (ಮಾಹೆ) ಕರ್ನಾಟಕದ ರಾಜ್ಯದ್ದೆನ್ನುವುದು ಹೆಮ್ಮೆ. ಇದಕ್ಕಾಗಿ 26,000 ಪುಟಗಳ ದಾಖಲೆಗಳನ್ನು ಇಲಾಖೆಗೆ ನಿಗದಿತ 90 ದಿನದೊಳಗೆ ನೀಡಲಾಗಿತ್ತು ಎಂದರು.
ಐಒಇ ಮಾನ್ಯತೆ ಪಡೆದ ಸಂಸ್ಥೆಗಳಿಗೆ ಎಂಎಚ್‌ಆರ್‌ಡಿ ನೀಡಿದ ಮಾರ್ಗ ದರ್ಶಿ ಸೂತ್ರಗಳಲ್ಲಿ ಈ ಸಂಸ್ಥೆ ಮುಂದಿನ 10 ವರ್ಷಗಳಲ್ಲಿ ವಿಶ್ವದ ಅಗ್ರಗಣ್ಯ 500 ವಿವಿಗಳಲ್ಲಿ ಸ್ಥಾನ ಪಡೆಯಬೇಕಾಗಿದೆ. ಮುಂದೆ ಅದು ವಿಶ್ವದ ಅಗ್ರ 100 ವಿವಿಗಳಲ್ಲಿ ಸ್ಥಾನ ಪಡೆಯಬೇಕೆಂದು ಅದರ ಉದ್ದೇಶವಾಗಿದೆ ಎಂದು ಡಾ.ಸಂದೀಪ್ ಶೆಣೈ ನುಡಿದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ರಿಜಿಸ್ಟ್ರಾರ್ ಹಾಗೂ ಎಂಇಎಂಜಿಯ ಅಧ್ಯಕ್ಷ ಡಾ.ರಂಜನ್ ಆರ್.ಪೈ, ಮಾಹೆಯ ಟ್ರಸ್ಟಿ ವಸಂತಿ ಆರ್.ಪೈ, ಮಾಹೆಯ ಪ್ರೊ ವೈಸ್ ಚಾನ್ಸಲರ್‌ಗಳಾದ ಡಾ.ವಿ.ಸುರೇಂದ್ರ ಶೆಟ್ಟಿ ಮತ್ತು ಡಾ.ಸಿ.ಎಸ್.ತಿಮ್ಮಯ್ಯ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಸ್ವಾಗತಿಸಿದರೆ, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಂದಿಸಿದರು. ಟೆಡ್ಡಿ ಆಂಡ್ರೂ ಕಾರ್ಯಕ್ರಮ ನಿರೂಪಿಸಿದರು.







