ಗಂಗೊಳ್ಳಿ: ಗಾಯಗೊಂಡ ಕಡಲಾಮೆಗೆ ಚಿಕಿತ್ಸೆ

ಗಂಗೊಳ್ಳಿ, ಜು.24: ಗಂಗೊಳ್ಳಿ ಚರ್ಚ್ ರಸ್ತೆಯ ಸಮುದ್ರ ತೀರದಲ್ಲಿ ಗಾಯ ಗೊಂಡು ಇಂದು ಪತ್ತೆಯಾದ ಕಡಲಾಮೆಗೆ ಸೂಕ್ತ ಚಿಕಿತ್ಸೆ ನೀಡಿ ಸಂಜೆ ವೇಳೆ ಮರಳಿ ಸಮುದ್ರಕ್ಕೆ ಬಿಡಲಾಯಿತು.
ಮಧ್ಯಾಹ್ನ ವೇಳೆ ಬಲ ಮುಂಗಾಲು ಹಾಗೂ ಬಾಯಿ ಸಮೀಪ ಗಾಯ ಗೊಂಡ ಸ್ಥಿತಿಯಲ್ಲಿ ಸಮುದ್ರ ತೀರದಲ್ಲಿ ಪತ್ತೆಯಾದ ಕಡಲಾಮೆಯ ಬಗ್ಗೆ ಗುಜ್ಜಾಡಿಯ ರಾಜು ಆಚಾರಿ ಎಂಬವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ದರು. ಅದರಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಕುಂದಾಪುರ ವಲಯ ಆಲೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್, ಅರಣ್ಯ ರಕ್ಷಕ ಉದಯ ಹಾಗೂ ಸ್ಥಳೀಯರು ಸೇರಿ ಆಮೆಯನ್ನು ಪಶುವೈದ್ಯರ ಬಳಿ ಕೊಂಡೊಯ್ಯಲಾಯಿತು.
ವೈದ್ಯರು ಗಾಯಗೊಂಡ ಆಮೆಗೆ ಸೂಕ್ತ ಚಿಕಿತ್ಸೆ ನೀಡಿದರು. ಬಳಿಕ ಚಿಕಿತ್ಸೆ ಪಡೆದ ಆಮೆಯನ್ನು ಮರವಂತೆಯ ಮೀನುಗಾರ ರಾಜೇಶ್ ಖಾರ್ವಿ ಸಹಾಯದಿಂದ ಮರಳಿ ಸಮುದ್ರಕ್ಕೆ ಬಿಡಲಾಯಿತು. ಸುಮಾರು 70ವರ್ಷ ಪ್ರಾಯದ ಈ ಕಡಲಾಮೆಯು ಮೀನಿನ ಬಲೆಗೆ ಸಿಲುಕಿ ಗಾಯಗೊಂಡಿರ ಬಹುದೆಂದು ಶಂಕಿಸಲಾಗಿದೆ. ಈ ಸಂದರ್ಭದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಹೆಡ್‌ಕಾನ್‌ಸ್ಟೇಬಲ್‌ಗಳಾದ ಗಣೇಶ್ ಬಳೆಗಾರ ಹಾಗೂ ಉದಯ ಹಾಜರಿದ್ದರು.







