ಉಡುಪಿ: ಕನ್ಯಾನ ಧರ್ಮಸಂಸದ್ ಪೂರ್ವಭಾವಿ ಸಭೆ

ಉಡುಪಿ, ಜು.24: ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ವತಿ ಯಿಂದ ಧರ್ಮಸ್ಥಳ ನಿತ್ಯಾನಂದ ನಗರದಲ್ಲಿ ಸೆ.3ರಂದು ಮಹಾಸಂಸ್ಥಾನಮ್ ಇದರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾ ನೋತ್ಸವದ ಪ್ರಯುಕ್ತ ನಡೆಯುವ ಧರ್ಮಸಂಸದ್‌ನ ಪೂರ್ವಭಾವಿ ಸಭೆಯು ಮಂಗಳವಾರ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಜರಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ರಾಮ ಕ್ಷೇತ್ರ ಮಹಾಸಂಸ್ಥಾನಂ ಶ್ರೀಬ್ರಹ್ಮಾ ನಂದ ಸರಸ್ವತಿ ಸ್ವಾಮೀಜಿ, ರಾಷ್ಟ್ರದ ಹಿತವೇ ಪರಮ ಹಿತ, ಲೋಕ ಕಲ್ಯಾಣವೇ ಶ್ರೇಷ್ಠ ಕಾರ್ಯ ಎಂಬ ನಿಟ್ಟಿನಲ್ಲಿ ಸನಾತನ ಧರ್ಮವನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸುವ ಮೂಲಕ ಸನಾತನ ರಾಷ್ಟ್ರ ನಿರ್ಮಾಣ ಮಾಡುವ ಅಗತ್ಯತೆ ಇದೆ ಎಂದು ತಿಳಿಸಿದರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಭಾರತೀಯ ಸಂಸ್ಕಾರ ಶಿಕ್ಷಣವನ್ನು ಪ್ರತಿಪಾಧಿಸುವ ನಿಟ್ಟಿನಲ್ಲಿ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮುಂಚೂಣಿಯಲ್ಲಿದ್ದಾರೆ. ಅವರ ಮಹತ್ವಾಕಾಂಕ್ಷಿಯ ಧರ್ಮಸಂಸದ್‌ಗೆ ನಾವೆಲ್ಲ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಪಟ್ಟಾಭಿಷೇಕ ದಶಮಾನೋತ್ಸವ ಮತ್ತು ಧರ್ಮಸಂಸದ್ ಕಾರ್ಯಕ್ರಮದ ಜಿಲ್ಲಾ ಸಮಿತಿ ಪದಾಧಿಕಾರಿಗಳ ಹೆಸರನ್ನು ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು. ಜಿಲ್ಲಾ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ವಿಶ್ವಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ವಿಲಾಸ್ ನಾಯಕ್, ಬಿ.ಎನ್.ಶಂಕರ ಪೂಜಾರಿ, ಚಿತ್ತರಂಜನ್, ಬಿ.ಬಿ.ಪೂಜಾರಿ, ಕೃಷ್ಣಪ್ಪಪೂಜಾರಿ, ಮೋಹನ್ ಉಜ್ಜೋಡಿ ಉಪಸ್ಥಿತರಿದ್ದರು. ಅಚ್ಯುತ ಅಮಿನ್ ಕಲ್ಮಾಡಿ ಸ್ವಾಗತಿಸಿದರು.







