ಮಧ್ಯಪ್ರದೇಶ: 5 ಸರಕಾರಿ ಕಾಲೇಜು ಆಸ್ಪತ್ರೆಗಳ 500 ವೈದ್ಯರು ರಾಜೀನಾಮೆ

ಭೋಪಾಲ, ಜು.24: ಉತ್ತಮ ಶಿಷ್ಯವೇತನ, ಉಪಕರಣ ಹಾಗೂ ಇತರ ಸೌಕರ್ಯ ಒದಗಿಸಲು ಆಗ್ರಹಿಸಿ ಮಧ್ಯಪ್ರದೇಶದಲ್ಲಿ 500 ಕಿರಿಯ ವೈದ್ಯರು ಮಂಗಳವಾರ ರಾಜೀನಾಮೆ ಸಲ್ಲಿಸಿದ್ದು, ವೈದ್ಯಕೀಯ ಸೇವೆಗೆ ತೊಡಕಾಗಿದೆ ಎಂದು ಮೂಲಗಳು ತಿಳಿಸಿವೆ.
ರೇವಾದ ಸಂಜಯ್‌ಗಾಂಧಿ ಸ್ಮಾರಕ ಆಸ್ಪತ್ರೆ, ಭೋಪಾಲದ ಗಾಂಧಿ ಸ್ಮಾರಕ ಆಸ್ಪತ್ರೆ ಸೇರಿದಂತೆ ಐದು ಸರಕಾರಿ ಕಾಲೇಜು ಆಸ್ಪತ್ರೆಗಳಲ್ಲಿ ಈ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದರು. ಕಿರಿಯ ವೈದ್ಯರು ಯಾವುದೇ ತರಗತಿಗೆ ಹಾಜರಾಗದಿರಲು ನಿರ್ಧರಿಸಿದ್ದಾರೆ ಎಂದು ಕಿರಿಯ ವೈದ್ಯರ ಸಂಘಟನೆ(ಜೆಯುಡಿಎ)ಯ ರಾಜ್ಯಾಧ್ಯಕ್ಷ ಸಚೇತ್ ಸಕ್ಸೇನಾ ತಿಳಿಸಿದ್ದಾರೆ.
ತಮಗೆ ನೀಡುತ್ತಿರುವ ಶಿಷ್ಯವೇತನವನ್ನು ಹೆಚ್ಚಿಸಬೇಕೆಂಬುದು ಇವರ ಪ್ರಮುಖ ಬೇಡಿಕೆಯಾಗಿತ್ತು. ತೃತೀಯ ವರ್ಷದ ಸ್ನಾತಕೋತ್ತರ ರೆಸಿಡೆಂಟ್‌ಗಳಿಗೆ (ತರಬೇತಿ ಪಡೆಯುವ ವೈದ್ಯರು) ತಿಂಗಳಿಗೆ 69 ಸಾವಿರ ರೂ, ದ್ವಿತೀಯ ವರ್ಷದ ಸ್ನಾತಕೋತ್ತರ ರೆಸಿಡೆಂಟ್‌ಗಳಿಗೆ ತಿಂಗಳಿಗೆ 67 ಸಾವಿರ ರೂ, ಪ್ರಥಮ ವರ್ಷದ ಸ್ನಾತಕೋತ್ತರ ರೆಸಿಡೆಂಟ್‌ಗಳಿಗೆ ತಿಂಗಳಿಗೆ 65 ಸಾವಿರ ರೂ, ಕಿರಿಯ ರೆಸಿಡೆಂಟ್‌ಗಳಿಗೆ ತಿಂಗಳಿಗೆ 50 ಸಾವಿರ ರೂ, ಇಂಟರ್ನ್‌ಶಿಪ್ ಮಾಡುವವರಿಗೆ ತಿಂಗಳಿಗೆ 20 ಸಾವಿರ ರೂ. ಶಿಷ್ಯವೇತನ ನೀಡಬೇಕು ಎಂಬುದು ಇವರ ಪ್ರಮುಖ ಬೇಡಿಕೆಯಾಗಿದೆ. ಅಲ್ಲದೆ ಪರೀಕ್ಷಾ ಶುಲ್ಕ ಕಡಿಮೆಗೊಳಿಸುವುದು, ಉತ್ತಮ ಹಾಸ್ಟೆಲ್ ವ್ಯವಸ್ಥೆ ಮುಂತಾದ ಬೇಡಿಕೆಗಳನ್ನು ಮುಂದಿರಿಸಿದ್ದ ಕಿರಿಯ ವೈದ್ಯರು ಸೋಮವಾರದಿಂದ ಅನಿರ್ಧಿಷ್ಟಾವಧಿಯ ಮುಷ್ಕರ ನಡೆಸುವುದಾಗಿ ತಿಳಿಸಿದ್ದರು.
ಆದರೆ ಆಡಳಿತ ವರ್ಗದೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಕಾರಣ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಸಂಘಟನೆ ತಿಳಿಸಿದೆ. ಕಿರಿಯ ವೈದ್ಯರ ರಾಜೀನಾಮೆಯಿಂದಾಗಿ ಇಂದೋರ್, ಭೋಪಾಲ, ಗ್ವಾಲಿಯರ್, ರೇವ ಮತ್ತು ಜಬಲ್‌ಪುರ ಸೇರಿದಂತೆ ಹಲವು ನಗರಗಳಲ್ಲಿ ವೈದ್ಯಕೀಯ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.







