ತುಮಕೂರು: 32ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಫ್: ಅಮೋಘ ಬಿಸ್ಟ್, ಲಕ್ಷಣ ಸುಬ್ರಮಣಿ ಚಾಂಪಿಯನ್ಸ್

ತುಮಕೂರು, ಜು.24: ಮಂಡ್ಯ ಚೆಸ್ ಅಕಾಡೆಮಿ ಮತ್ತು ತುಮಕೂರಿನ ಕ್ಯಾಸಲ್ ಸ್ಕೂಲ್ ಆಫ್ ಚೆಸ್, ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಹಾಗೂ ಅಖಿಲ ಭಾರತ ಚೆಸ್ ಸಂಸ್ಥೆ ಸಹಯೋಗದಲ್ಲಿ ಜುಲೈ 16 ರಿಂದ ನಗರದ ಬಂಡಿಮನೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 32ನೇ ರಾಷ್ಟ್ರೀಯ ಏಳು ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಚೆಸ್ ಪಂದ್ಯಾವಳಿಯಲ್ಲಿ, ಬಾಲಕರ ವಿಭಾಗದಲ್ಲಿ ಕರ್ನಾಟಕದ ಅಮೋಘ ಬಿಸ್ಟ್ ಮತ್ತು ಬಾಲಕಿಯರ ವಿಭಾಗದಲ್ಲಿ ತಮಿಳುನಾಡಿನ ಲಕ್ಷಣ ಸುಬ್ರಮಣ್ಯಿಯನ್ ಪ್ರಥಮ ಬಹುಮಾನ ಪಡೆದಿದ್ದಾರೆ.
ಪಂದ್ಯಾವಳಿಯಲ್ಲಿ ಭಾರತದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಮಾರು 368ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದು, ಎಲ್ಲಾ ಚೆಸ್ ಪಟುಗಳು ತಲಾ 11 ರೌಂಡ್ ಆಟವಾಡಬೇಕಿದ್ದು, 9.5 ಅಂಕ ಪಡೆದ ಅಮೋಘ್ ಬಿಸ್ಟ್ ಮೊದಲು ಸ್ಥಾನ ಪಡೆದು 26 ಸಾವಿರ ರೂ ನಗದು ಬಹುಮಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಲಕ್ಷಣ ಸುಬ್ರಮಣಿಯನ್ 10 ಪಾಯಿಂಟ್ ಪಡೆದು ಮೊದಲ ಸ್ಥಾನದ ಜೊತೆಗೆ 26 ಸಾವಿರ ರು ನಗದು ಪುರಸ್ಕಾರಕ್ಕೆ ಪಾತ್ರಳಾಗಿದ್ದಾಳೆ. ಉಳಿದಂತೆ ಬಾಲಕರ ವಿಭಾಗದಲ್ಲಿ ಜೈವರ್ಧನ್ ರಾಜ್ ದ್ವಿತೀಯ, ಅಯುಷ್ಮಾನ್ ಮೋಹಂತಿ ತೃತೀಯ ಬಹುಮಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಆಂಧ್ರ ಪ್ರದೇಶದ ಕೆ.ಎನ.ಮೀನಾಕ್ಷಿ ಮತ್ತು ಉತ್ತರ ಪ್ರದೇಶದ ಐಷಾನಿ ಪತಾಕ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.
ತಲಾ 11 ರೌಂಡಗಳಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ನಗದು ಬಹುಮಾನ ವಿತರಿಸಿದ್ದು, ಬಾಲಕ, ಬಾಲಕರಿಯರಿಗೆ ತಲಾ 2 ಲಕ್ಷ ರೂಗಳ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು. ಅಲ್ಲದೆ ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಮರದ ಚೆಸ್ ಪರಿಕರಗಳನ್ನು ವಿತರಿಸಲಾಯಿತು.
ವಿಜೇತ ಮಕ್ಕಳಿಗೆ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಸಂಸದ ಎಸ್.ಪಿ.ಮುದ್ದ ಹನುಮೇಗೌಡ, ಶಾಸಕ ಬಿ.ಸಿ.ಪಾಟೀಲ್, ಎಸ್.ಐ.ಟಿ. ನಿರ್ದೆಶಕರಾದ ಡಾ.ಎಂ.ಎನ್.ಚನ್ನಬಸಪ್ಪ, ಪತ್ರಕರ್ತ ಎಸ್.ನಾಗಣ್ಣ, ಉದ್ಯಮಿ ಆಶಾಪ್ರಸನ್ನಕುಮಾರ್, ಮಂಡ್ಯ ಚೆಸ್ ಅಕಾಡೆಮಿಯ ಅಧ್ಯಕ್ಷ ಮಂಜುನಾಥ ಜೈನ್, ಕಾರ್ಯದರ್ಶಿ ಮಾಧುರಿ ಚೈನ್, ಡಾ.ಪದ್ಮಾಕ್ಷಿ ಲೋಕೇಶ್, ರಾಘವೇಂದ್ರ, ಗಣೇಶ್ ಶರ್ಮ ಮತ್ತಿತರರು ವಿತರಿಸಿದರು.







