ತುಮಕೂರು: ದರೋಡೆ ಪ್ರಕರಣ; ಐವರು ಆರೋಪಿಗಳಿಗೆ ಶಿಕ್ಷೆ ಪ್ರಕಟ

ತುಮಕೂರು,ಜು.24: ಕೇವಲ ಎರಡು ತಿಂಗಳ ಅವಧಿಯಲ್ಲಿ ಎರಡು ಪ್ರತ್ಯೇಕ ಹೆದ್ದಾರಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳಿಗೆ ತುಮಕೂರಿನ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಲಾ 13 ವರ್ಷ ಜೈಲು ವಾಸ ಮತ್ತು 13 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಅಪರಾಧಿಗಳಾದ ರಫಿ, ಮುದಸ್ಸಿರ್, ಮಜರ್ ಮತ್ತು ಚಾಂದ್ ಪಾಷ ಎಂಬುವವರು 2016ರ ಅಕ್ಟೋಬರ್ 02 ರಂದು ಕುಣಿಗಲ್ ತಾಲೂಕು ಗವಿಮಠದ ಬಳಿ ಆಂದ್ರ ಪ್ರದೇಶದ ನೊಂದಣಿ ಇರುವ ಲಾರಿಯನ್ನು ಅಡ್ಡಗಟ್ಟಿ ಚಾಲಕ ಮತ್ತು ಕ್ಲೀನರ್ ಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ಚಾಕುವಿನಿಂದ ಬೆದರಿಸಿ, ಡ್ಯಾಸ್ ಬೋರ್ಡನಲ್ಲಿದ್ದ ಸುಮಾರು 45 ಸಾವಿರ ದೂ ನಗದು, ಡೈವರ್ ಬಳಿಯಿಂದ 10 ಸಾವಿರ ರೂ ಹಾಗೂ ಕ್ಲೀನರ್ ಬಳಿಯಿದ್ದ ಮೊಬೈಲ್ ಪೋನ್ ದೋಚಿ ಪರಾರಿಯಾಗಿದ್ದರು.
ಆದೇ ದಿನ ಆರೋಪಿಗಳನ್ನು ಬಂಧಿಸಿದ ತನಿಖಾಧಿಕಾರಿ ಬಾಳೇಗೌಡ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸದರಿ ಕೇಸಿನ ವಿಚಾರಣೆ ನಡೆಸಿದ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳನ್ನು ಅಪರಾಧಿಗಳೆಂದು ಪರಿಗಣಿಸಿ, ಐಪಿಸಿ ಕಲಂ 395 ಅಪರಾಧಕ್ಕೆ ತಲಾ ಐದು ವರ್ಷ ಜೈಲು ಹಾಗೂ 10 ಸಾವಿರ ರೂ.ದಂಡ ವಿಧಿಸಿ 2018ರ ಜುಲೈ 19 ರಂದು ತೀರ್ಪು ನೀಡಿದೆ.
ಇದೇ ಅರೋಪಿಗಳು 2016ರ ಆಗಸ್ಟ್ 04 ರಂದು ಕುಣಿಗಲ್ ಪೊಲೀಸ್ ಠಾಣಾ ಸರಹದ್ದಿನ ಗವಿಮಠದ ಬಳಿ ಹೊರ ರಾಜ್ಯದ ನೊಂದಣಿ ಲಾರಿಗಳನ್ನು ಕೇಂದ್ರೀಕರಿಸಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದರು. ಅವರನ್ನು ಪಿ.ಎಸ್.ಐ ಕೇಶವಮೂರ್ತಿ ಬಂಧಿಸಿ, ಆರೋಪಿಗಳ ವಿರುದ್ದ ಐಪಿಸಿ ಕಲಂ 399 ಮತ್ತು 402 ಅಡಿಯಲ್ಲಿ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಅರ್ಜಿ ಸಲ್ಲಿಸಿದ್ದರು. ಸದರಿ ಕೇಸಿನ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ಅವರು ಐಪಿಸಿ ಕಲಂ 399 ಅಪರಾಧಕ್ಕಾಗಿ ಐದು ಜನ ಆರೋಪಿಗಳಿಗೆ ತಲಾ 5 ವರ್ಷ ಜೈಲು ಹಾಗೂ 3000 ರೂ. ದಂಡ ಮತ್ತು ಐಪಿಸಿ 402ರ ಅಪರಾಧಕ್ಕಾಗಿ 3 ವರ್ಷ ಕಠಿಣ ಸಜೆ ಮತ್ತು 3000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಎರಡು ಪ್ರಕರಣಗಳಲ್ಲಿ ಸರಕಾರದ ಪರವಾಗಿ ಎಪಿಪಿ ಆರ್.ಟಿ.ಅರುಣ ವಾದ ಮಂಡಿಸಿದ್ದಾರೆ







