ಸರ್ಕಾರ ಕಡೆಗಣಿಸಿದಲ್ಲಿ ಕುಟುಂಬ ಸಮೇತ ಬೀದಿಗಿಳಿದು ಹೋರಾಟ-ಕೆ.ಎ. ಸಿದ್ದೀಕ್
ಅವೈಜ್ಞಾನಿಕ ಸಾರಿಗೆ ನೀತಿ ವಿರೋಧಿಸಿ ಎಸ್‌ಡಿಎಯು ಪ್ರತಿಭಟನೆ

ಪುತ್ತೂರು, ಜು. 24: ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಯಾವುದೇ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಅಟೋ ರಿಕ್ಷಾ ಚಾಲಕರ ಬಗ್ಗೆ ಪ್ರಸ್ತಾಪ ಕೂಡ ಮಾಡದೆ ಅಟೋ ರಿಕ್ಷಾ ಚಾಲಕ -ಮಾಲಕರಾಗಿ ದುಡಿಯುತ್ತಿರುವ ಕಾರ್ಮಿಕ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸರ್ಕಾರ ನಮ್ಮ ಬೇಡಿಕೆಯನ್ನು ಕಡೆಗಣಿಸಿದಲ್ಲಿ ಅಟೋ ರಿಕ್ಷಾ ಚಾಲಕರು ತಮ್ಮ ತಂದೆ, ತಾಯಿ, ಅವರ ಪತ್ನಿ ಮಕ್ಕಳ ಸಮೇತ ಇಡೀ ಕುಟುಂಬವನ್ನು ಬೀದಿಗಿಳಿಸಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ.ಎ. ಸಿದ್ದೀಕ್ ಹೇಳಿದರು.
ಅವರು ಅಟೋ ಚಾಲಕ ಮಾಲಕರಿಗೆ ಸಮಸ್ಯೆಯಾಗಿ ಕಾಡುತ್ತಿರುವ ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ನೀತಿ , ವಿಮಾ ಕಾನೂನು, ಅವೈಜ್ಞಾನಿಕ ಸಾರಿಗೆ ನೀತಿ ಮತ್ತಿತರ ಕಾನೂನು ನೀತಿಗಳನ್ನು ವಿರೋಧಿಸಿ ಪುತ್ತೂರಿನ ಸೋಷಿಯಲ್ ಡೆಮೊಕ್ರಟಿಕ್ ಅಟೋ ಯೂನಿಯನ್ (ಎಸ್‌ಡಿಎಯು) ಸಂಘಟನೆಯ ನೇತೃತ್ವದಲ್ಲಿ ಮಂಗಳವಾರ ಪುತ್ತೂರಿನಲ್ಲಿ ರಿಕ್ಷಾ ಚಾಲಕರಿಂದ ಅಟೋ ರ್ಯಾಲಿ ಮತ್ತು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಬಿಜೆಪಿಗೆ ದೇಣಿಗೆ ನೀಡುತ್ತಿರುವ ದೊಡ್ಡ ಉದ್ಯಮಿಗಳೇ ಇಂಧನ ಬೆಲೆ ಏರಿಕೆ ಮಾಡುತ್ತಿದ್ದು, ಬಿಜೆಪಿ ತನ್ನ ಲಾಭಕ್ಕಾಗಿ ಈ ರೀತಿ ಮಾಡಿಸುತ್ತಿದೆ. ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುತ್ತಿರುವುದು ಉತ್ತಮ ವಿಚಾರ ಆದರೆ ಅದನ್ನು ಸರಿದೂಗಿಸಲು ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಬಡ ಅಟೋ ರಿಕ್ಷಾ ಚಾಲಕರನ್ನು ಬಲಿಗೊಡುತ್ತಿದೆ. ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್‌ಗೆ ವಿಧಿಸುವಷ್ಟು ತೆರಿಗೆ ಬೇರಾವ ರಾಜ್ಯದಲ್ಲಿ ಇಲ್ಲ. ಶ್ರೀಮಂತರು ಅಟೋ ರಿಕ್ಷಾ ಚಾಲಕರಾಗಿ ದುಡಿಯುವುದಿಲ್ಲ. ಬಡವರು ಮಾತ್ರ ತಮ್ಮ ಬದುಕಿಗಾಗಿ ಈ ವೃತ್ತಿ ನಡೆಸುತ್ತಿರುವುದರಿಂದ ಬ್ಯಾಜ್ಡ್ ನೀಡಲು ಎಸ್ಸೆಸ್ಸೆಲ್ಸಿ ಕಲಿತಿರಬೇಕು ಎಂಬ ಶಿಕ್ಷಣ ಅರ್ಹತೆ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಟ್ರೇಡ್ ಯೂನಿಯನ್ ಸಂಘಟನೆಯ ರಾಜ್ಯಾಧ್ಯಕ್ಷರಾದ ವಕೀಲ ಮಜೀದ್ ಖಾನ್ ಮಾತನಾಡಿದರು.
ಪ್ರತಿಭಟನಾ ಸಭೆಗೆ ಮೊದಲು ಪುತ್ತೂರಿನ ದರ್ಬೆ ಬೈಪಾಸ್ ಸರ್ಕಲ್ ಬಳಿಯಿಂದ ಅಟೋ ರ್ಯಾಲಿಯ ಮೂಲಕ ಇಲ್ಲಿನ ಮಿನಿ ವಿಧಾನ ಸೌಧದ ಬಳಿಗೆ ಆಗಮಿಸಿದ ರಿಕ್ಷಾ ಚಾಲಕರು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಟೋ ಚಾಲಕ ವಿರೋಧಿ ನೀತಿಯನ್ನು ಖಂಡಿಸಿದರು.
ಸೋಷಿಯಲ್ ಡೆಮೊಕ್ರಟಿಕ್ ಅಟೋ ಯೂನಿಯನ್‌ನ ಪುತ್ತೂರು ತಾಲೂಕು ಅಧ್ಯಕ್ಷ ಮಹಮ್ಮದ್ ಕುಂಞಿ ಮಾಂತೂರು, ಜಿಲ್ಲಾ ಸಂಚಾಲಕ ಜಾಬೀರ್ ಅರಿಯಡ್ಕ, ತಾಲೂಕು ಸಂಚಾಲಕ ಅಶ್ರಫ್ ಬಾವು, ತಾಲೂಕು ಕಾರ್ಯದರ್ಶಿ ಹಂಝ ಮಣಿಯ, ಎಸ್‌ಡಿಪಿಐ ನಗರ ಸಮಿತಿ ಅಧ್ಯಕ್ಷ ಹಂಝ ಅಫ್ನಾನ್, ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಎಂ.ಎ.ರಫೀಕ್ ಸವಣೂರು ಮತ್ತಿತರರು ಉಪಸ್ಥಿತರಿದ್ದರು.







