ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ: ದೂರು ನೀಡಲು ಕೇಮಾರುಶ್ರೀ ನಿರ್ಧಾರ

ಉಡುಪಿ, ಜು.24: ಶಿರೂರು ಸ್ವಾಮೀಜಿಯ ನಿಗೂಢ ಸಾವಿನ ತನಿಖೆಗೆ ಒತ್ತಾಯಿಸಿದ್ದ ಕೇಮಾರು ಸಾಂದೀಪನಿ ಮಠದ ಶ್ರೀಈಶ ವಿಠಲದಾಸ ಸ್ವಾಮೀಜಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಹಾಗೂ ಬೆದರಿಕೆಗಳು ಬರುತ್ತಿದ್ದು, ಈ ಬಗ್ಗೆ ಸ್ವಾಮೀಜಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
‘ಶಿರೂರು ಶ್ರೀಗಳ ಪಾರ್ಥಿವ ಶರೀರಕ್ಕೆ ಪೋಸ್ಟ್ ಮಾರ್ಟಮ್ ಮಾಡಬೇಕಾಗಿ ಬಂದಿರುವುದರಿಂದ ಅವರ ಪಾರ್ಥಿವ ಶರೀರಕ್ಕೆ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಸ್ನಾನ ಮತ್ತು ವಸಂತ ಮಂಟಪದಲ್ಲಿ ಮಂಗಳಾರತಿಯ ಗೌರವವೂ ತಪ್ಪುವಂತಾಯಿತು. ಅವರಿಂದ ಉಪಕಾರ ಪಡೆದು ಇಷ್ಟು ಮಾಡಿದ್ರಿ, ಪ್ರಾಣ ದೇವರು ದೊಡ್ಡವರು’, ಪೇಜಾವರ ಶ್ರೀಗಳ ಶಿಷ್ಯ ಅಂತ ಹೇಳಿಕೊಳ್ಳೊ ಯೋಗ್ಯತೆ ಇದೆಯಾ ಅಂತ ಕನ್ನಡಿ ಮುಂದೆ ನೋಡಿಕೊಳ್ಳಿ ಸ್ವಾಮಿ’ ಎಂಬಿತ್ಯಾದಿ ನಿಂದನಾತ್ಮಕ ಪೋಸ್ಟ್‌ಗಳನ್ನು ಕೇಮಾರು ಸ್ವಾಮೀಜಿಯನ್ನುದ್ದೇಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಮಾರು ಸ್ವಾಮೀಜಿ, ಶಿರೂರು ಸ್ವಾಮೀಜಿಯ ಸಾವಿನ ತನಿಖೆಗೆ ಒತ್ತಾಯಿಸಿದ ಕಾರಣಕ್ಕೆ ನನ್ನ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ನಿಂದನೆ, ಬೆದರಿಕೆಗಳನ್ನು ಹಾಕಲಾಗುತ್ತಿವೆ. ದೇವರ ಹೆಸರಿನಲ್ಲಿ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಇದು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆಯಿಂದ ಮಠದ ಭಕ್ತರಿಗೆ ನೋವಾಗಿದೆ. ಈ ಸಂಬಂಧ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ಕಾನೂನು ತಜ್ಞರು ಹಾಗೂ ಪೊಲೀಸ್ ಅಧಿಕಾರಿಗಳ ಸಲಹೆಯನ್ನು ಪಡೆದುಕೊಂಡಿದ್ದೇನೆ. ನಿಂದನೆ ಹಾಗೂ ಬೆದರಿಕೆಯೊಡ್ಡಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.







