ತಾಜ್ ಮಹಲ್ ರಕ್ಷಣೆಗೆ ಕರಡು ಯೋಜನೆ ಸಲ್ಲಿಸಿದ ಉ.ಪ್ರದೇಶ ಸರಕಾರ

ಲಕ್ನೊ, ಜು.24: ಮಂಗಳವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಉತ್ತರ ಪ್ರದೇಶ ಸಲ್ಲಿಸಿದ ಮೊದಲ ಕರಡು ಮುನ್ನೋಟ ದಾಖಲೆಯಲ್ಲಿ ಮೊಘಲರ ಕಾಲದ ವೈಭವೋಪೇತ ಕಟ್ಟಡ ಮತ್ತು ಅದರ ಸುತ್ತಮುತ್ತಲ ಪರಿಸರದ ರಕ್ಷಣೆಗೆ ಸಮಗ್ರ ಯೋಜನೆಯನ್ನು ರೂಪಿಸಿದೆ.
ಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳ ಮುಚ್ಚುಗಡೆ, ಪ್ಲಾಸ್ಟಿಕ್ ನಿಷೇಧ ವಲಯ ನಿರ್ಮಾಣ ಮತ್ತು ಯಮುನಾ ಪ್ರಸ್ಥಭೂಮಿಯಲ್ಲಿ ನಿರ್ಮಾಣ ಕಾರ್ಯಗಳಿಗೆ ತಡೆ ಮುಂತಾದ ಹಲವು ಕ್ರಮಗಳನ್ನು ಈ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
17ನೇ ಶತಮಾನದ ಸ್ಮಾರಕವನ್ನು ಉಳಿಸುವಲ್ಲಿ ರಾಜ್ಯ ಸರಕಾರ ಪ್ರದರ್ಶಿಸುತ್ತಿರುವ ಉದಾಸೀನತೆಯ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಜುಲೈ 11ರಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ತಾಜ್ ಮಹಲ್ ಪರಿಸರದಲ್ಲಿ ಬಾಟಲಿ ನೀರನ್ನು ಕೊಂಡೊಯ್ಯುವುದರ ಮೇಲೆ ನಿಷೇಧ ಹೇರುವ ಮತ್ತು ಇಡೀ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಮಾಡುವ ಯೋಜನೆಯನ್ನು ಸರಕಾರ ಹೊಂದಿದೆ ಎಂದು ಸರಕಾರದ ಪ್ರತಿನಿಧಿಗಳು ನ್ಯಾಯಾಧೀಶ ಎಂ.ಬಿ ಲೋಕುರ್ ಹಾಗೂ ದೀಪಕ್ ಗುಪ್ತಾ ಅವರ ಪೀಠಕ್ಕೆ ತಿಳಿಸಿದ್ದಾರೆ. ಎಲ್ಲ ಮಾಲಿನ್ಯಾಕರಕ ಕಾರ್ಖಾನೆಗಳನ್ನು ಮುಚ್ಚಲಾಗುವುದು ಮತ್ತು ಆಗ್ರಾದಲ್ಲಿ ಪ್ರವಾಸಿ ತಾಣವನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಜೊತೆಗೆ ತಾಜ್ ಮಹಲ್ ಪರಿಸರದಲ್ಲಿ ಕಾಲ್ನಡಿಗೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಸಮಗ್ರ ಸಂಚಾರ ವ್ಯವಸ್ಥಾಪನಾ ಯೋಜನೆಯನ್ನು ರೂಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಮುನಾ ತೀರದಲ್ಲಿ ಎಲ್ಲ ರೀತಿಯ ನಿರ್ಮಾಣ ಕಾರ್ಯಗಳಿಗೆ ನಿಷೇಧ ಹೇರಲಾಗುವುದು ಮತ್ತು ನದಿತೀರದಲ್ಲಿ ಕೇವಲ ನಿಸರ್ಗದತ್ತ ಗಡಿಮರಗಳು ಇರುವಂತೆ ನೋಡಲಾಗುವುದು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.







