ಮೈಸೂರು: ಮಹಾರಾಣಿ ಕಾಲೇಜ್ ಗೆ ಸಚಿವ ಜಿ.ಟಿ ದೇವೇಗೌಡ ಭೇಟಿ; ಸಮಸ್ಯೆ ಬಿಚ್ಚಿಟ್ಟ ವಿದ್ಯಾರ್ಥಿಗಳು

ಮೈಸೂರು,ಜು.24: ಮಹಾರಾಣಿ ಕಾಲೇಜಿಗೆ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಭೇಟಿ ನೀಡಿ ಕಾಲೇಜಿನ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು, ಪ್ರಾಂಶುಪಾಲರ ಜೊತೆ ಚರ್ಚಿಸಿದರು.
ಸಚಿವರ ಜೊತೆ ಕಾಲೇಜಿನ ಸಮಸ್ಯೆಗಳನ್ನು ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಎಳೆ ಎಳೆಯಾಗಿ ಬಿಚ್ಚಿಟ್ಟರು. ಮಹಾರಾಣಿ ಕಲಾ ಕಾಲೇಜಿನಲ್ಲಿ ಆಡಿಟೋರಿಯಂ, ಗ್ರಂಥಾಲಯ, 65 ಕೊಠಡಿಗಳು ಹಾಗೂ ಕಾಂಪೌಂಡ್ ಅವಶ್ಯಕತೆ ಇದೆ. ಹಾಸ್ಟೆಲ್ ಮೇಲ್ಛಾವಣಿಯಿಂದ ನೀರು ಸೋರುತ್ತಿದೆ. ಶೌಚಾಲಯದ ಸಮಸ್ಯೆ, ಹಾಸ್ಟೆಲ್ ನಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿನಿಗಳಿದ್ದು, ಕೊಠಡಿ ಸಮಸ್ಯೆ ಇದೆ. ಹಾಸ್ಟೆಲ್ ಸಮಸ್ಯೆಗಳಿಂದ ವಿದ್ಯಾರ್ಥಿಗಳು ರೋಗಕ್ಕೆ ತುತ್ತಾಗುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಕಾಲೇಜಿನ ಸಮಸ್ಯೆ ಆಲಿಸಿದ ಬಳಿಕ ಉನ್ನತ ಶಿಕ್ಷಣ ಸಚಿವರು ಮಾತನಾಡಿ, ಶಿಥಿಲಾವಸ್ಥೆ ತಲುಪಿರುವ ಕಟ್ಟಡ ಪುನರ್ನಿರ್ಮಾಣ ಸಾಧ್ಯವಿಲ್ಲ. ಪ್ರತಿಯೊಂದು ವಿಭಾಗಕ್ಕೂ ಕಾಂಪ್ಲೆಕ್ಸ್ ಮಾದರಿಯಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲಾಗುವುದು. ನಬಾರ್ಡ್, ವರ್ಲ್ಡ್ ಬ್ಯಾಂಕ್ ನಿಂದ ಅನುದಾನಕ್ಕೆ ಬೇಡಿಕೆ ಇಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೂತನ ಕಟ್ಟಣ ನಿರ್ಮಾಣ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು. ಪುರಾತನ ಕಟ್ಟಡದಲ್ಲಿ ಮುಂದಿನ ವರ್ಷದ ವರೆಗೆ ಮಾತ್ರ ಹೊಂದಾಣಿಕೆ ಮೂಲಕ ತರಗತಿ ನಡೆಸಿ. ಕಾಲೇಜು ನಿರ್ಮಾಣಕ್ಕೆ ಮುಂದಿನ ವರ್ಷದಲ್ಲಿ ನಗರದಲ್ಲಿ 5 ಎಕರೆ ಜಾಗ ಖರೀದಿಗೆ ಚಿಂತನೆ ನಡೆಸಲಾಗಿದೆ ಎಂದರು.
ವಾಲ್ಮೀಕಿ ರಸ್ತೆಯ ನೂತನ ಮಹಾರಾಣಿ ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಮಂಜುಳ, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಆಷಾಢ ಮಾಸದಲ್ಲಿ ಸಚಿವರು ನೂತನ ಕಚೇರಿಗೆ ಹೋಗದ ಕುರಿತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಅಮವಾಸ್ಯೆ, ಆಷಾಢ ಹುಣ್ಣಿಮೆ, ಮಂಗಳವಾರ ಎಲ್ಲಾ ಒಳ್ಳೆಯ ದಿನಗಳು. ನಾನು ಶುಭ ಕಾರ್ಯಕ್ಕೆ ದಿನ ನೋಡೋದಿಲ್ಲ ಎಂದರು. ಶಾಸಗಿ ,ಸರ್ಕಾರಿ ಶಾಲಾ ಮಕ್ಕಳ ಬಸ್ ಪಾಸ್ ವಿಚಾರಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.







