ಇ-ಕಾಮರ್ಸ್ ಸಂಸ್ಥೆಗಳಿಂದ ಕ್ಯಾಶ್ ಆನ್ ಡೆಲಿವರಿ ಒಪ್ಪಂದ ಅಧಿಕೃತವಲ್ಲ: ಆರ್‌ಬಿಐ

ಹೊಸದಿಲ್ಲಿ, ಜು.24: ಫ್ಲಿಪ್‌ಕಾರ್ಟ್ ಮತ್ತು ಅಮೆಝಾನ್ ಮುಂತಾದ ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರಿಗೆ ನೀಡಿರುವ ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಸೌಲಭ್ಯವು ಅಧಿಕೃತವಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ತಿಳಿಸಿದೆ. ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿಗೆ ಆರ್‌ಬಿಐ ಈ ರೀತಿ ಉತ್ತರ ನೀಡಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಅಮೆಝಾನ್ ಮತ್ತು ಫ್ಲಿಪ್‌ಕಾರ್ಟ್‌ನಂಥ ಪಾವತಿ ಮಧ್ಯವರ್ತಿಗಳು ಪಾವತಿ ಮತ್ತು ಒಪ್ಪಂದ ಕಾಯ್ದೆಯ 8ನೇ ವಿಧಿ ಅಡಿಯಲ್ಲಿ ಬರುವುದಿಲ್ಲ ಎಂದು ಇಂಡಿಯ ಎಫ್‌ಡಿಐ ವಾಚ್‌ನ ಧರ್ಮೇಂದ್ರ ಕುಮಾರ್ ಸಲ್ಲಿಸಿರುವ ಮಾಹಿತಿ ಹಕ್ಕು ಅರ್ಜಿಗೆ ಆರ್‌ಬಿಐ ಉತ್ತರಿಸಿದೆ. ಈ ಕಾಯ್ದೆಯು ವಿದ್ಯುನ್ಮಾನ ಮತ್ತು ಆನ್‌ಲೈನ್ ಪಾವತಿಗಳನ್ನು ಉಲ್ಲೇಖಿಸಿದರೂ ಕ್ಯಾಶ್ ಆನ್ ಡೆಲಿವರಿ ಮೂಲಕ ಹಣವನ್ನು ಪಡೆಯುವುದನ್ನು ಇದರಲ್ಲಿ ಉಲ್ಲೇಖಿಸಲಾಗಿಲ್ಲ. ಈ ಕುರಿತು ಆರ್‌ಬಿಐ ಯಾವುದೇ ನಿರ್ದಿಷ್ಟ ಸೂಚನೆಯನ್ನು ನೀಡಿಲ್ಲ ಎಂದು ಆರ್‌ಬಿಐ ತಿಳಿಸಿದೆ.
ಸಿಒಡಿ ವಿಧಾನದಲ್ಲಿ ಇ-ಕಾಮರ್ಸ್ ಸಂಸ್ಥೆಗಳು ಸರಕುಗಳನ್ನು ಗ್ರಾಹಕರಿಗೆ ತಲುಪಿಸಿದ ನಂತರ ಅವರಿಂದ ಮಾರಾಟಗಾರರ ಪರವಾಗಿ ನಗದನ್ನು ಪಡೆದುಕೊಳ್ಳುತ್ತದೆ.
ತಜ್ಞರ ಪ್ರಕಾರ, ಕ್ಯಾಶ್ ಆನ್ ಡೆಲಿವರಿಯನ್ನು ಸಂಪೂರ್ಣವಾಗಿ ಅಸಿಂಧುಗೊಳಿಸುವ ಅಗತ್ಯವೂ ಇಲ್ಲ. ಕ್ಯಾಶ್ ಆನ್ ಡೆಲಿವರಿ ಮಾದರಿಯು ಅಕ್ರಮ ಅಥವಾ ಅನಧಿಕೃತ ಎನ್ನಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.





