ಕನಸು ನನಸು..!
ಬೆಂಗಳೂರು: ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 12 ವರ್ಷ ಪ್ರಾಯದ ಬಾಲಕನೋರ್ವನ ಪೊಲೀಸ್ ಇನ್‌ಸ್ಪೆಕ್ಟರ್ ಆಗಬೇಕು ಎಂಬ ಆಸೆ ಈಡೇರಿಸಿದ ಅವಿಸ್ಮರಣೀಯ ಕ್ಷಣಕ್ಕೆ ಬೆಂಗಳೂರಿನ ವಿ.ವಿ.ಪುರಂ ಪೊಲೀಸ್ ಠಾಣೆ ಸಾಕ್ಷಿಯಾಯಿತು. ಮಂಗಳವಾರ ಬೆಳಗ್ಗೆ 9:30ರಿಂದ 10.30ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾರಾಯಣಹಳ್ಳಿಯ ಶಶಾಂಕ್ ಹೆಸರಿನ ಬಾಲಕ ವಿವಿ ಪುರಂ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿ ಹಲವು ದಿನಗಳ ಕನಸೊಂದನ್ನು ಈಡೇರಿಸಿಕೊಂಡಿದ್ದಾನೆ. ನಾರಾಯಣಹಳ್ಳಿಯ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಬಾಲಕ ಶಶಾಂಕ್, ತಾಲಾ ಸೇಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಆರು ತಿಂಗಳಿಂದ ವಾಣಿ ವಿಲಾಸ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತೀಚೆಗೆ ಇದೇ ಆಸ್ಪತ್ರೆಗೆ ದಾಖಲಾಗಿದ್ದು, ಪ್ರತಿಷ್ಠಾನವೊಂದರ ಪದಾಧಿಕಾರಿಯೊಬ್ಬರು, ಪೊಲೀಸ್ ಎಸ್ಸೈ ಆಗಬೇಕೆಂಬ ಬಾಲಕನ ಕನಸಿನ ಬಗ್ಗೆ ಅರಿತು, ಅದನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಗಳ ಗಮನಕ್ಕೆ ತಂದಾಗ, ಅಧಿಕಾರಿಗಳು ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ವೇಳೆ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ವಿವಿ ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್.ಆರ್. ಮಹಾಂತೇಶ್‌ರೆಡ್ಡಿ ಸೇರಿ ಪ್ರಮುಖರು ಹಾಜರಿದ್ದರು.





