ಸಂಭ್ರಮದ ಸ್ವಾತಂತ್ರ ದಿನಾಚರಣೆಗೆ ಪೂರ್ವ ಸಿದ್ಧತೆ: ಶಿವಮೊಗ್ಗ ಜಿಲ್ಲಾಧಿಕಾರಿ
ಶಿವಮೊಗ್ಗ, ಜು.24: ಸ್ವಾತಂತ್ರ ದಿನಾಚರಣೆಯನ್ನು ಸಡಗರ ಮತ್ತು ಸಂಭ್ರಮಗಳಿಂದ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ತಮ್ಮ ಕಚೇರಿಯಲ್ಲಿ ನಡೆದ ಸ್ವಾತಂತ್ರೋತ್ಸವ ದಿನಾಚರಣೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ರತಿ ವರ್ಷದಂತೆ ಆ.15ರಂದು ಸ್ವಾತಂತ್ರ ದಿನವನ್ನು ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಗುವುದು. ಸರಕಾರಿ ಕಚೇರಿಗಳು ಮಾತ್ರವಲ್ಲದೆ, ಪ್ರಮುಖ ವೃತ್ತಗಳಿಗೂ ದೀಪಾಲಂಕಾರ ಮಾಡಬೇಕು. ವಾಣಿಜ್ಯ ಸಂಸ್ಥೆಗಳು, ಸರಕಾರೇತರ ಸಂಘ-ಸಂಸ್ಥೆಗಳು ಸಹ ದೀಪಾಲಂಕಾರ ಮಾಡಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಭ್ರಮದಲ್ಲಿ ಭಾಗವಹಿಸುವ ಮೂಲಕ ಅರ್ಥಪೂರ್ಣವಾಗಿ ಸ್ವಾತಂತ್ರೋತ್ಸವವನ್ನು ಆಚರಿಸಬೇಕು ಎಂದರು.
ಸ್ವಾತಂತ್ರ್ಯ ದಿನಾಚರಣೆಯನ್ನು ವ್ಯವಸ್ಥಿತವಾಗಿ ಆಯೋಜಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಇಲಾಖೆಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಆಚರಣೆಗೆ ಯಾವುದೇ ಚ್ಯುತಿಯಾಗದಂತೆ ಎಚ್ಚರಿಕೆ ವಹಿಸಬೇಕು. ವೇದಿಕೆ ಅಲಂಕಾರ, ರಾಷ್ಟ್ರಗೀತೆ, ನಾಡಗೀತೆ ನುಡಿಸುವಿಕೆ, ಪರೇಡ್ ಸಿದ್ಧತೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ವಿದ್ಯಾರ್ಥಿಗಳಿಂದ ಬ್ಯಾಂಡ್ ನುಡಿಸುವಿಕೆ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪರೇಡ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಮರ್ಪಕ ತರಬೇತಿ ನೀಡಬೇಕು. ಉತ್ತಮ ಸಮವಸ್ತ್ರ ತೊಟ್ಟು ಶಿಸ್ತು ಬದ್ಧವಾಗಿ ಪರೇಡ್ ನಡೆಸಲು ವ್ಯವಸ್ಥೆ ಮಾಡಬೇಕು ಎಂದರು.
ಪೊಲೀಸ್ ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೂ ತರಬೇತಿ ನೀಡಬೇಕು. ಇವರೆಲ್ಲರಿಗೂ ಉಪಾಹಾರದ ವ್ಯವಸ್ಥೆ ಕಲ್ಪಿಸಬೇಕು. ಸ್ವಾತಂತ್ರ್ಯ ದಿನಾಚರಣೆ ದಿನದಂದು ಮೆಗ್ಗಾನ್ ಆಸ್ಪತ್ರೆಯಲ್ಲಿನ ಎಲ್ಲಾ ಒಳರೋಗಿಗಳಿಗೆ, ಅಂಧ ಮಕ್ಕಳ ಶಾಲಾ ವಿದ್ಯಾರ್ಥಿಗಳಿಗೆ, ರಿಮಾಂಡ್ ಹೋಂನಲ್ಲಿರುವವರಿಗೆ ಹಣ್ಣು ಹಂಪಲು ವಿತರಣೆ ಮಾಡಬೇಕು. ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಬೇಕು. ಸಂಜೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿ ದಾಸೇಗೌಡ, ಅರಣ್ಯ ಸಂರಕ್ಷಣಾಧಿಕಾರಿ ಆಂತೋನಿ ಮರಿಯಪ್ಪ, ಸೂಡಾ ಆಯುಕ್ತ ಮೂಕಪ್ಪ ಕರಭೀಮಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.