ಲಂಚ ನೀಡುವವರಿಗೂ ಶಿಕ್ಷೆ ವಿಧಿಸುವ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರ

ಹೊಸದಿಲ್ಲಿ, ಜು.24: ಲಂಚ ಸ್ವೀಕರಿಸುವವರ ಜೊತೆಗೆ ಲಂಚ ನೀಡುವವರಿಗೂ ಶಿಕ್ಷೆ ವಿಧಿಸುವಂತೆ 1998ರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿರುವ ನೂತನ ಮಸೂದೆಗೆ ಮಂಗಳವಾರ ಲೋಕಸಭೆಯಲ್ಲಿ ಅಂಗೀಕರ ದೊರಕಿದೆ. ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ರಾಜ್ಯ ಸಚಿವರಾಗಿರುವ ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ಭಸ್ರಷ್ಟಾಚಾರ ಕಡೆ (ತಿದ್ದುಪಡಿ) ಕಾಯ್ದೆಯನ್ನು ಮಂಡಿಸಿದರು. ಸರಕಾರದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಲು ಮತ್ತು ಕಾನೂನಿನಡಿಯಲ್ಲಿ ನಿಬಂಧನೆಯನ್ನು ಕಠಿಣಗೊಳಿಸಲು ಈ ತಿದ್ದುಪಡಿಯನ್ನು ಮಾಡಲಾಗಿದೆ. ಈ ಕ್ರಮವು ನರೇಂದ್ರ ಮೋದಿ ಸರಕಾರಕ್ಕೆ ಇರುವ ಭ್ರಷ್ಟಾಚಾರದ ಬಗ್ಗೆ ಇರುವ ಶೂನ್ಯ ಸಹಿಷ್ಣುವನ್ನು ಪ್ರತಿಬಿಂಬಿಸುತ್ತದೆ ಎಂದು ಸಿಂಗ್ ಈ ವೇಳೆ ತಿಳಿಸಿದ್ದಾರೆ.
ಲಂಚವನ್ನು ಸ್ವೀಕರಿಸುವುದು ಮಾತ್ರವಲ್ಲ ಅದನ್ನು ನೀಡುವುದನ್ನೂ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುವ ಮೂಲಕ ಪ್ರಾಮಾಣಿಕ ಅಧಿಕಾರಿಗಳ ಶೋಷಣೆಯೂ ನಿಲ್ಲಲಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಮುಂದೆ ಎಲ್ಲ ಸರಕಾರಿ ಅಧಿಕಾರಿಗಳ ಪ್ರಕರಣಗಳಲ್ಲಿ ತನಿಖೆಗೆ ಪೂರ್ವ ಅನುಮತಿಯ ಅಗತ್ಯ ಬೇಕಾಗುತ್ತದೆ. ಈ ಹಿಂದೆ ಈ ನಿಯಮವು ಜಂಟಿ ಕಾರ್ಯದರ್ಶಿ ದರ್ಜೆಗಿಂತ ಮೇಲ್ಪಟ್ಟ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿತ್ತು. 43 ತಿದ್ದುಪಡಿಗಳೊಂದಿಗೆ ಮಂಡಿಸಲಾಗಿದ್ದ ಮಸೂದೆಯು ಕಳೆದ ವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತ್ತು.
ಭ್ರಷ್ಟಾಚಾರ ಪ್ರಕರಣಗಳ ಶೀಘ್ರ ವಿಲೇವಾರಿಗೆ ನೂತನ ಮಸೂದೆಯಲ್ಲಿ ಹಲವು ಅವಕಾಶಗಳಿವೆ. ಜೊತೆಗೆ ಅಧಿಕಾರಿಗಳ ನಿವೃತ್ತಿಯ ನಂತರವೂ ಅವರ ವಿರುದ್ಧ ನೀಡಲಾಗುವ ದ್ವೇಷಪೂರಿತ ದೂರುಗಳ ವಿರುದ್ಧವೂ ಅಧಿಕಾರಿಗಳಿಗೆ ರಕ್ಷಣೆ ಒದಗಿಸಲಾಗಿದೆ. ಲಂಚ ಸ್ವೀಕರಿಸಿದವರಿಗೆ ಕನಿಷ್ಟ ಜೈಲುಶಿಕ್ಷೆಯನ್ನು ಮೂರು ವರ್ಷಕ್ಕೆ ಏರಿಸಲಾಗಿದ್ದು ಏಳು ವರ್ಷಗಳವರೆಗೂ ವಿಸ್ತರಿಸಬಹುದಾಗಿದೆ.







