ಅಮೋಲ್ ಕಾಳೆಯ ಡೈರಿಯ 2ನೆ ಸ್ಥಾನದಲ್ಲಿತ್ತು ಗೌರಿ ಲಂಕೇಶ್ ಹೆಸರು
ಮೊದಲ ಹೆಸರು ಯಾರದ್ದು?, 'ಹಿಟ್ ಲಿಸ್ಟ್'ನಲ್ಲಿದ್ದ ವಿಚಾರವಾದಿಗಳು ಯಾರ್ಯಾರು ಗೊತ್ತಾ?

ಬೆಂಗಳೂರು, ಜು.25: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆಯಿಂದ ವಶಪಡಿಸಿಕೊಳ್ಳಲಾಗಿರುವ ಡೈರಿಯಲ್ಲಿ 34 ಹೆಸರುಗಳ ಎರಡು ಪಟ್ಟಿಗಳಿದ್ದು, ಗೌರಿ ಲಂಕೇಶ್ ಅವರ ಹೆಸರು ಒಂದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ವಿಶೇಷ ತನಿಖಾ ತಂಡ ಕಂಡುಕೊಂಡಿದೆ ಎಂದು indianexpress.com ವರದಿ ಮಾಡಿದೆ.
ಎರಡು ಪಟ್ಟಿಗಳಲ್ಲೊಂದರಲ್ಲಿ ರಂಗಕರ್ಮಿ ಗಿರೀಶ್ ಕಾರ್ನಾಡ್ ಅವರ ಹೆಸರು ಮೊದಲನೇ ಸ್ಥಾನದಲ್ಲಿದೆ. ಈ ಪಟ್ಟಿಗಳಲ್ಲಿರುವ ಎಲ್ಲರಿಗೂ ಭದ್ರತೆಯನ್ನು ಸರಕಾರದ ವತಿಯಿಂದ ಒದಗಿಸಲಾಗಿದ್ದು, ಈ ಪಟ್ಟಿಗಳಲ್ಲಿರುವ ಪ್ರಮುಖ ಹೆಸರುಗಳು ಕರ್ನಾಟಕ ಮತ್ತು ಮಹಾರಾಷ್ಟ್ರದವರದ್ದಾಗಿದೆ.
ಪುಣೆ ನಿವಾಸಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಮಾಜಿ ಸಂಚಾಲಕನಾಗಿರುವ ಅಮೋಲ್ ಕಾಳೆ ಗೌರಿ ಲಂಕೇಶ್ ಮತ್ತಿತರರ ಹೆಸರುಗಳಿರುವ ಪಟ್ಟಿಗಳನ್ನು ಆಗಸ್ಟ್ 2016ರಲ್ಲಿಯೇ ತಯಾರಿಸಿದ್ದನೆಂದು ಶಂಕಿಸಲಾಗಿದೆ.
ಬೆಂಗಳೂರಿನ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ ಸಲ್ಲಿಸಿದ ದಾಖಲೆಗಳಲ್ಲಿ ತಿಳಿಸಲಾಗಿರುವಂತೆ ಕಾಳೆಯ ಹತ್ತಿರವಿದ್ದ ಡೈರಿಯ ಒಂದು ಪುಟದಲ್ಲಿದ್ದ ಹಾಗೂ ಇಂಗ್ಲಿಷಿನಲ್ಲಿ ಬರೆಯಲಾಗಿದ್ದ ಎಂಟು ಹೆಸರುಗಳಲ್ಲಿ ನಿಡುಮಾಮಿಡಿ ಸ್ವಾಮೀಜಿಯ ಹೆಸರು ಎಂಟನೇ ಸ್ಥಾನದಲ್ಲಿತ್ತು. 26 ಹೆಸರುಗಳಿದ್ದ ಇನ್ನೊಂದು ಪಟ್ಟಿ ಡೈರಿಯ ಇನ್ನೊಂದು ಪುಟದಲ್ಲಿದ್ದು, ಅದರಲ್ಲಿ ಆಗಸ್ಟ್ 22, 2016 ದಿನಾಂಕ ನಮೂದಿತವಾಗಿತ್ತು.
ಕೆಲವು ಮಂದಿ ಇತರರ ಸಲಹೆಯೊಂದಿಗೆ ಕಾಳೆ ಈ ಡೈರಿಯನ್ನು ತಯಾರಿಸಿದ್ದನೆನ್ನಲಾಗಿದ್ದು, ಎಲ್ಲಾ 34 ಮಂದಿಯೂ ಸಂಘಪರಿವಾರದ ವಿರುದ್ಧವಾಗಿದ್ದವರು ಎಂಬುದು ಉಲ್ಲೇಖಾರ್ಹ. ಪಟ್ಟಿಯಲ್ಲಿ ಗೌರಿ ಲಂಕೇಶ್, ಗಿರೀಶ್ ಕಾರ್ನಾಡ್, ನಿಡುಮಾಮಿಡಿ ಸ್ವಾಮೀಜಿ ಸೇರಿದಂತೆ ಯೋಗೇಶ್ ಮಾಸ್ಟರ್, ಚಂದ್ರಶೇಖರ್ ಪಾಟೀಲ್, ಬಂಜಗೆರೆ ಜಯಪ್ರಕಾಶ್, ಹಿಂದುಳಿದ ಜಾತಿಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕಾನಾಥ್ ಅವರ ಹೆಸರುಗಳೂ ಇವೆ ಎಂದು indianexpress.com ವರದಿ ಮಾಡಿದೆ.
ಇವರ ಹೊರತಾಗಿ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಪಾಟೀಲ ಪುಟ್ಟಪ್ಪ, ಚನ್ನವೀರ ಕಣವಿ, ವಿಚಾರವಾದಿಗಳಾದ ನಟರಾಜ್ ಹುಳಿಯಾರ್, ನರೇಂದ್ರ ನಾಯಕ್ ಹಾಗೂ ಮಾಜಿ ಐಎಎಸ್ ಅಧಿಕಾರಿ ಎಸ್ ಎಂ ಜಾಮ್ದರ್ ಅವರಿಗೂ ರಕ್ಷಣೆಯೊದಗಿಸಲಾಗಿದೆ.







