ಲಾಕರ್‌ನಲ್ಲಿ ಬಹುಕೋಟಿ ಸಂಪತ್ತು ಪತ್ತೆ ಪ್ರಕರಣ: ಸಂಪರ್ಕಕ್ಕೆ ಸಿಗುತ್ತಿಲ್ಲ ಸಂಪತಿನ್ತ ಒಡೆಯ !

ಬೆಂಗಳೂರು, ಜು.25: ಬೌರಿಂಗ್ ಇನ್‌ಸ್ಟಿಟ್ಯೂಟ್‌ನ ಲಾಕರ್‌ನಲ್ಲಿ ಕೋಟ್ಯಂತರ ರೂ. ಸಂಪತ್ತು ಬೆಳಕಿಗೆ ಬಂದಿದ್ದ ಪ್ರಕರಣ ಸಂಬಂಧ ಆದಾಯ ತೆರಿಗೆ(ಐಟಿ) ತನಿಖಾಧಿಕಾರಿಗಳು ವಿಚಾರಣೆಗೆ ಮುಂದಾದರೂ, ಉದ್ಯಮಿ ಅವಿನಾಶ್ ಅಮರಲಾಲ್ ಮೊಬೈಲ್ ಸಂಪರ್ಕ ಕಡಿತಗೊಳಿಸಿ, ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಜು.22 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಉದ್ಯಮಿ ಮನೆ ಮೇಲೆ ದಾಳಿ ನಡೆಸಿ ಅವಿನಾಶ್‌ನನ್ನು ವಿಚಾರಣೆಗೊಳಪಡಿಸಿ ಹೆಚ್ಚಿನ ತನಿಖೆಗೆ ಕಚೇರಿಗೆ ಬರುವಂತೆ ನೋಟಿಸ್ ನೀಡಿ ಜು.23 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಬುಧವಾರ ಉದ್ಯಮಿ ಯಾರ ಸಂಪರ್ಕಕ್ಕೂ ದೊರೆತಿಲ್ಲ ಎಂದು ಹೇಳಲಾಗುತ್ತಿದೆ.
ವಿಚಾರಣೆಗೆ ಗೈರು ಆಗಿರುವ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಲಾಕರ್‌ನಲ್ಲಿ ಸಿಕ್ಕ ದಾಖಲೆಗಳನ್ನೆ ಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಆದರೆ, ಬಹುಕೋಟಿ ಸಂಪತ್ತಿನ ಬಗ್ಗೆ ಅವಿನಾಶ್ ಮಾಹಿತಿ ನೀಡಬೇಕಾಗಿದೆ. ಇದರ ಹಿಂದಿರುವ ರಾಜಕಾರಣಿಗಳು ಹಾಗೂ ಉದ್ಯಮಿಗಳ ಹೆಸರು ಪತ್ತೆಹಚ್ಚಬೇಕಿದೆ. ಅಲ್ಲದೇ ಇದರಲ್ಲಿ ಒಟ್ಟು ನಾಲ್ವರು ಸಚಿವರ ಆಸ್ತಿಪತ್ರಗಳು ಸಹ ಇದೇ ಸಮಯದಲ್ಲಿ ಪತ್ತೆಯಾಗಿವೆ ಎನ್ನಲಾಗುತ್ತಿದೆ.
ಉದ್ಯಮಿಯ ಸಂಪತ್ತಿನ ಹಿಂದೆ ಕೆಲ ಪ್ರಭಾವಿ ರಾಜಕಾರಣಿಗಳು ಇರುವ ಬಗ್ಗೆ ಮಾಹಿತಿ ಇದ್ದರೂ, ಈ ಬಗ್ಗೆ ಐಟಿ ಅಧಿಕಾರಿಗಳು ಯಾವುದೇ ಸುಳಿವು ನೀಡಿಲ್ಲ. ಅವಿನಾಶ್ ತಲೆಮರೆಸಿಕೊಂಡಿರುವ ಸಂಬಂಧವೂ ತನಿಖಾಧಿಕಾರಿಗಳು ಕಾನೂನು ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.







