ಅಣೆಕಟ್ಟು ಒಡೆದು ಪ್ರವಾಹ: ಕನಿಷ್ಠ 26 ಸಾವು
ಮರ, ಮೇಲ್ಛಾವಣಿಗಳಲ್ಲಿ ಸ್ಕಿಕಿಹಾಕಿಕೊಂಡಿರುವ 3,000ಕ್ಕೂ ಅಧಿಕ ಜನ

ವಿಯಾಂಟಿಯಾನ್ (ಲಾವೋಸ್), ಜು. 25: ದಕ್ಷಿಣ ಲಾವೋಸ್ ದೇಶದಲ್ಲಿ ಅಣೆಕಟ್ಟೊಂದು ಒಡೆದು ಗ್ರಾಮಗಳಲ್ಲಿ ಪ್ರವಾಹದ ನೀರು ತುಂಬಿದ ಬಳಿಕ, ಸಿಕ್ಕಿಹಾಕಿಕೊಂಡಿರುವ 3000ಕ್ಕೂ ಅಧಿಕ ಜನರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಬುಧವಾರ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಈ ಪೈಕಿ ಹೆಚ್ಚಿನವರು ಮರಗಳು ಮತ್ತು ಮನೆಗಳ ಮೇಲ್ಛಾವಣಿಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ನಡುವೆ, ದುರಂತ ಸಂಭವಿಸಿದ ಎರಡು ದಿನಗಳ ಬಳಿಕ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ ಹಾಗೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ದಿಢೀರ್ ಪ್ರವಾಹದ ಹಿನ್ನೆಲೆಯಲ್ಲಿ ಸುಮಾರು 7,000 ಮಂದಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈವರೆಗೆ 2,800ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ‘‘ಮುಂದಿನ ಕೆಲಸ ಮೃತಪಟ್ಟವರನ್ನು ಪತ್ತೆಹಚ್ಚಿ ಗುರುತಿಸುವುದಾಗಿದೆ. ಆದರೆ, ಈಗ ಬದುಕಿರುವ ಜನರನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ’’ ಎಂದು ಸನಮ್ಕ್ಸೇ ಜಿಲ್ಲೆಯ ಗವರ್ನರ್ ಬೋನ್ಹಾಮ್ ಫೋಮಸೇನ್ ‘ವಿಯಾಂಟೈನ್ ಟೈಮ್ಸ್’ ಪತ್ರಿಕೆಗೆ ಹೇಳಿದ್ದಾರೆ. ಬಿಲಿಯ ಡಾಲರ್ ವೆಚ್ಚದ ಕ್ಸೆ-ಪಿಯನ್ ಕ್ಸೆ-ನಾಮ್ನಾಯ್ ಜಲವಿದ್ಯುತ್ ಯೋಜನೆಯ ಭಾಗವಾಗಿರುವ ಅಣೆಕಟ್ಟು ಸೋಮವಾರ ಸಂಜೆ ಒಡೆದಿದ್ದು, 17000 ಕೋಟಿ ಕ್ಯೂಬಿಕ್ ಅಡಿಗಿಂತಲೂ ಹೆಚ್ಚಿನ ನೀರು ಹೊರಗೆ ಹರಿದಿದೆ.





