ಬೈಕಂಪಾಡಿ: ಲಾರಿ ಢಿಕ್ಕಿ; ಸ್ಕೂಟರ್ ಸವಾರ ಮೃತ್ಯು

ಮಂಗಳೂರು, ಜು.25: ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಬೈಕಂಪಾಡಿ ರೈಲ್ವೆ ಮೇಲ್ಸೇತುವೆಯಲ್ಲಿ ಬುಧವಾರ ನಡೆದಿದೆ.
ಕಾವೂರಿನ ಶಾಂತಿನಗರ ನಿವಾಸಿ ಹಮೀದ್ (70) ಮೃತರು ಎಂದು ಗುರುತಿಸಲಾಗಿದೆ. ಹಮೀದ್ ಮೊದಲು ಬಟ್ಟೆ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ರಾ.ಹೆ.66ರಲ್ಲಿ ಸುರತ್ಕಲ್‌ನಿಂದ ಕೂಳೂರು ಕಡೆಗೆ ಹಮೀದ್ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದು, ಬೈಕಂಪಾಡಿ ರೈಲ್ವೆ ಸೇತುವೆಯ ಮೇಲೆ ಅಪಘಾತ ನಡೆದಿದೆ.
ಸುರತ್ಕಲ್ ಕಡೆಯಿಂದ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ರಾಜೇಶ್ ಓವರ್‌ಟೇಕ್ ಮಾಡುವ ಭರದಲ್ಲಿ ಸ್ಕೂಟರ್‌ಗೆ ಢಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆಸೆಯಲ್ಪಟ್ಟ ಹಮೀದ್ ಗಂಭೀರವಾಗಿ ಗಾಯಗೊಂಡರು. ಗಾಯಾಳುವನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗಾಯಾಳು ಹಮೀದ್ ಮೃತಪಟ್ಟರು. ಅಪಘಾತಕ್ಕೆ ಕಾರಣನಾದ ಆರೋಪಿ, ಬೈಕಂಪಾಡಿಯ ನಿವಾಸಿ, ಚಾಲಕ ರಾಜೇಶ್ ವಿರುದ್ಧ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.





