ಶಿರೂರು ಶ್ರೀ ನಿಗೂಢ ಸಾವಿನ ಪ್ರಕರಣ: ಮಹಿಳೆ ಜೊತೆ ಇದ್ದ ಕೊಂಬಗುಡ್ಡೆ ವ್ಯಕ್ತಿಯ ವಿಚಾರಣೆ
ಉಡುಪಿ, ಜು.25: ಶಿರೂರು ಸ್ವಾಮೀಜಿಯೊಂದಿಗೆ ಆಪ್ತೆಯಾಗಿದ್ದ ಮಹಿಳೆ ಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಕಾಪು ಕೊಂಬಗುಡ್ಡೆಯ ವ್ಯಕ್ತಿ ಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಗಲ್ಫ್ ದೇಶದಲ್ಲಿ ಉದ್ಯೋಗಿಯಾಗಿದ್ದ 45 ವರ್ಷ ಪ್ರಾಯದ ಈ ವ್ಯಕ್ತಿ, ಇದೀಗ ಊರಿಗೆ ಬಂದು ಕೊಂಬಗುಡ್ಡೆ ಪೆಟ್ರೋಲ್ ಬಂಕ್ ಎದುರು ಸರ್ವಿಸ್ ಸ್ಟೇಶನ್‌ನ್ನು ಆರಂಭಿಸಿದ್ದಾರೆನ್ನಲಾಗಿದೆ. ಅಳದಂಗಡಿಯಲ್ಲಿ ಪತ್ತೆಯಾಗಿರುವ ಕಾರು ಇದೇ ವ್ಯಕ್ತಿಯದ್ದು ಎಂದು ಕಾಪುವಿನ ಸ್ಥಳೀಯರು ದೃಢಪಡಿಸಿದ್ದಾರೆ. ಈ ವ್ಯಕ್ತಿಗೂ ಶಿರೂರು ಸ್ವಾಮೀಜಿ ಆಪ್ತೆಗೂ ಮೊದಲೇ ಪರಿಚಯವಿದ್ದು, ಆಕೆ ಇವರಲ್ಲಿ ಸಹಾಯ ಕೋರಿದ್ದಾರೆನ್ನಲಾಗಿದೆ. ಇದೇ ಕಾರಣದಿಂದ ಇವರು ತನ್ನ ಕುಟುಂಬದ ಜೊತೆ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರೆಂದು ತಿಳಿದುಬಂದಿದೆ. ಇವರನ್ನು ಪೊಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದಾರೆಯೇ ಎಂಬುದು ಇನ್ನೂ ಧೃಢಪಟ್ಟಿಲ್ಲ.
ಡಿವಿಆರ್ ಗೊಂದಲ: ಶಿರೂರು ಸ್ವಾಮೀಜಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಜು.18ರಂದು ರಾತ್ರಿ ವೇಳೆ ನಾಪತ್ತೆಯಾಗಿದೆ ಎನ್ನಲಾದ ಮೂಲ ಮಠದ ಸಿಸಿ ಕ್ಯಾಮೆರಾದ ಡಿವಿಆರ್ ಬಗ್ಗೆ ಹಲವು ಊಹಾಪೋಹಾಗಳು ಈಗಲೂ ಕೇಳಿ ಬರುತ್ತಿದ್ದು, ಸಾಕಷ್ಟು ಗೊಂದಲ ಸೃಷ್ಠಿಸಿದೆ.
ಡಿವಿಆರ್‌ನ್ನು ಕೆಲವೊಂದು ವ್ಯಕ್ತಿಗಳು ಮೂಲ ಮಠದ ಹಿಂಭಾಗದಲ್ಲಿರುವ ಸ್ವರ್ಣ ನದಿಗೆ ಎಸೆದಿದ್ದು, ಅದನ್ನು ಪೊಲೀಸರು ಮುಳುಗು ತಜ್ಞರ ಸಹಾಯ ದಿಂದ ಹುಡುಕಿ ಪತ್ತೆ ಹಚ್ಚಿದ್ದಾರೆಂಬ ಸುದ್ದಿಗಳು ಕೇಳಿಬರುತ್ತಿವೆ. ಈ ಎಲ್ಲ ಗೊಂದಲದ ಮಧ್ಯೆ ಪೊಲೀಸ್ ಮೂಲವೊಂದು ಡಿವಿಆರ್ ಈವರೆಗೆ ಪತ್ತೆ ಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಇಂದು ಪ್ರಕರಣದ ತನಿಖಾ ತಂಡವೊಂದು ಶಿರೂರು ಸ್ವಾಮೀಜಿ ಆರಂಭ ದಲ್ಲಿ ದಾಖಲಾದ ಉಡುಪಿಯ ಖಾಸಗಿ ಆಸ್ಪತ್ರೆಗೆ ತೆರಳಿ ಕೆಲವೊಂದು ಮಾಹಿತಿ ಗಳನ್ನು ಕಲೆಹಾಕಿರುವ ಬಗ್ಗೆ ತಿಳಿದು ಬಂದಿದೆ. ಆದರೆ ತನಿಖಾ ತಂಡದ ನೇತೃತ್ವ ವಹಿಸಿರುವ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.







