ಅಕಾಡಮಿಗಳ ದಾಖಲೆಗಳು ಡಿಜಿಟಲೀಕರಣವಾಗಲಿ: ಸಚಿವೆ ಡಾ.ಜಯಮಾಲ

ಮಂಗಳೂರು, ಜು.25: ರಾಜ್ಯದಲ್ಲಿರುವ ವಿವಿಧ ಅಕಾಡಮಿಗಳು ತಮ್ಮ ಕಾರ್ಯ ಚಟುವಟಿಕೆಗಳ ಸ್ಥಿರ, ದೃಶ್ಯ ಮತ್ತು ಡಿಜಿಲೀಕರಣ ಮೂಲಕ ದಾಖಲೀಕರಣ ಮಾಡಿ ಇಡಬೇಕು. ಇದರಿಂದ ಮುಂದಿನ ಪೀಳಿಗೆಗೆ ಅನುಕೂಲ ಆಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಡಾ.ಜಯಮಾಲ ರಾಮಚಂದ್ರ ಹೇಳಿದ್ದಾರೆ.
ನಗರದ ತುಳು ಭವನದ ಸಿರಿ ಚಾವಡಿಯಲ್ಲಿ ಬುಧವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಅರೆಭಾಷೆ ಸಾಹಿತ್ಯ ಅಕಾಡೆಮಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲ್ಲಿಯ ಅಕಾಡೆಮಿಗಳು ಒಳ್ಳೆಯ ಕೆಲಸ ಮಾಡುತ್ತಿವೆ. ಅಧ್ಯಕ್ಷರ ಬೇಡಿಕೆಗಳನ್ನು ಪರಿಶೀಲಿಸಲಾಗುವುದು. ತುಳು ಭವನದ ಬಾಕಿ ಕಾಮಗಾರಿ ನಡೆಸಲು, ಮ್ಯೂಸಿಯಂ ಸ್ಥಾಪನೆಗೆ ನೆರವು ನೀಡಲಾಗುವುದು. ಬ್ಯಾರಿ, ಕೊಂಕಣಿ ಅಕಾಡೆಮಿಗಳ ಬೇಡಿಕೆಗಳಿಗೆ ಸ್ಪಂದಿಸಲಾಗುವುದು. ಅಕಾಡೆಮಿಗಳ ಅನುದಾನ, ಅಧ್ಯಕ್ಷರ ಕಾರು ಭತ್ಯೆ, ಸಂಬಳ ಮತ್ತು ಟೆಲಿಪೋನ್ ಬಿಲ್ ಭತ್ಯೆ ಕೂಡಾ ಹೆಚ್ಚಿಸಿದ್ದೇವೆ ಎಂದರು.
ಕಲಾವಿದರನ್ನು ಗುರುತಿಸುವ, ಮಾಸಾಶನ ವಂಚಿತರಿಗೆ ಕೊಡಿಸುವ, ಕಲಾ ತಂಡಗಳನ್ನು ಪ್ರೋತ್ಸಾಹಿಸಿ, ವಿಶ್ವಕ್ಕೆ ಪರಿಚಿಸುವ ಕೆಲಸ ಅಕಾಡೆಮಿಗಳು ಮಾಡಬೇಕು. ಅಕಾಡೆಮಿಗಳಲ್ಲಿ ಮಹಿಳೆಯರಿಗೆ ಆದ್ಯತೆ ಕೊಡಬೇಕು. ನಾಡು, ನುಡಿ, ಸಂಸ್ಕೃತಿ ಉಳಿಸುವ ಯಾವ ಕೆಲಸ ಮಾಡಿದರೂ ಸರಕಾರ ಪ್ರೋತ್ಸಾಹಿಸಲಿದೆ. ಭಾಷಾತೀತ, ಧರ್ಮಾತೀತವಾಗಿ ಎಲ್ಲರನ್ನೂ ಸರಕಾರ ಗೌರವಿಸಲಿದೆ ಎಂದು ಜಯಮಾಲ ಹೇಳಿದರು.
ನಾಲ್ಕು ಅಕಾಡೆಮಿಗಳ ಮೂಲಕ ನಾಲ್ಕು ಸಂಸ್ಕೃತಿಗಳ ಸಮ್ಮಿಲನಕ್ಕೆ ಸಾಕ್ಷಿಯಾಗಿರುವುದು ನನ್ನ ಭಾಗ್ಯ. ಒಂದು ದೇಶವನ್ನು ಅಲ್ಲಿಯ ಸಂಸ್ಕೃತಿ ಮೂಲಕ ಅಳೆಯಬಹುದು. ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ನಾಡಿಗೆ ಬರಗಾಲ ಬರಲಾರದು. ನಾಗಾರಾಧನೆ, ಭೂತಾರಾಧನೆ, ದೇವ, ದೈವದಲ್ಲಿ ನಂಬಿಕೆ, ಸಾಮಾಜಿಕ ನ್ಯಾಯ ಕಾಪಾಡುವ ಮಸೀದಿ, ಮಂದಿರ, ಚರ್ಚ್‌ಗಳನ್ನು ವಿಭಿನ್ನ ಸಂಸ್ಕೃತಿಯ ಪರಶುರಾಮನ ಸೃಷ್ಟಿಯಲ್ಲಿ ಮಾತ್ರ ಕಾಣಸಿಗಬಹುದು ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ.ನಾಯ್ಕ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್ ತಮ್ಮ ಅಕಾಡೆಮಿಗಳ ಕಾರ್ಯವೈಖರಿ ಮತ್ತು ವಿವಿಧ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.
ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ., ಉಪನಿರ್ದೇಶಕ ಚಂದ್ರಹಾಸ ರೈ ಬಿ. ಉಪಸ್ಥಿತರಿದ್ದರು. ಅಕಾಡೆಮಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಚಿವೆ ಡಾ.ಜಯಮಾಲ ಅವರನ್ನು ಸನ್ಮಾನಿಸಲಾಯಿತು.
ಕೊಂಕಣಿ ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು ಸ್ವಾಗತಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಹುಸೈನ್ ಕಾಟಿಪಳ್ಳ ವಂದಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ತಾರನಾಥ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.







