ರೂಪಾಯಿ ಮೌಲ್ಯ ಕುಸಿತ: ದುಬಾರಿಯಾಗಲಿದೆ ಕಾರು, ಟಿವಿ

ಹೊಸದಿಲ್ಲಿ, ಜು.25: ಡಾಲರ್ ವಿರುದ್ಧ ರೂಪಾಯಿ ನಿರಂತರ ಮೌಲ್ಯ ಕಳೆದುಕೊಳ್ಳುತ್ತಿದ್ದು, ಇದರ ಪರಿಣಾಮವಾಗಿ ಕಾರು ಮತ್ತು ಟಿವಿ ತಯಾರಕರು ಬೆಲೆಗಳನ್ನು ಏರಿಕೆ ಮಾಡಲು ಯೋಚಿಸುತ್ತಿರುವ ಕಾರಣ ಈ ವಸ್ತುಗಳ ಮೇಲೆ ಕಡಿತಗೊಳಿಸಲಾಗಿರುವ ಜಿಎಸ್‌ಟಿಯ ಲಾಭಾಂಶ ಗ್ರಾಹಕರಿಗೆ ಸಿಗುವುದು ಅನುಮಾನ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ವ್ಯಾಪಾರ ಸಮರದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅನಿಶ್ಚಿತತೆಯ ಪರಿಣಾಮ ಡಾಲರ್ ಬಲಗೊಳ್ಳುತ್ತಲೇ ಬರುತ್ತಿದ್ದು ಕಳೆದ ಕೆಲವು ತಿಂಗಳುಗಳಿಂದ ರೂಪಾಯಿ ಮೌಲ್ಯ ಕುಸಿಯುತ್ತಲೇ ಸಾಗಿದೆ. ಏಷ್ಯಾದ ಕರೆನ್ಸಿಗಳ ಪೈಕಿ ರೂಪಾಯಿ ಅತೀಹೆಚ್ಚು ಮೌಲ್ಯವನ್ನು ಕಳೆದುಕೊಂಡಿದೆ. ರೂಪಾಯಿ ಮೌಲ್ಯ ಕಳೆದುಕೊಂಡಿರುವ ಕಾರಣ ಆಮದು ಹೆಚ್ಚು ದುಬಾರಿಯಾಗಿದ್ದು ದೇಶೀಯ ಉತ್ಪನ್ನ ತಯಾರಕರ ವೆಚ್ಚವನ್ನೂ ಹೆಚ್ಚುಗೊಳಿಸಿದೆ. ಇದರಿಂದಾಗಿ ಕಾರು, ಟಿವಿ ಇತ್ಯಾದಿಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಲಕ್ಸುರಿ ಕಾರು ತಯಾರಕರು ಹೆಚ್ಚಿನೆಲ್ಲ ಬಿಡಿಭಾಗಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಾರೆ. ಇನ್ನು ದೇಶದ ಅತೀದೊಡ್ಡ ಕಾರು ಉತ್ಪಾದಕರು ಕೂಡಾ ಹಲವು ಬಿಡಿಭಾಗಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳುತ್ತಾರೆ.
ರೂಪಾಯಿ ಮೌಲ್ಯ ಕುಸಿತದಿಂದ ಹೂಡಿಕೆ ಕಡಿಮೆಯಾಗುವ, ಆಮದು ವೆಚ್ಚ ಹೆಚ್ಚುವ ಮತ್ತು ಹಣದುಬ್ಬರ ಏರಿಕೆಯಿಂದ ಕಂಪೆನಿಗಳ ಹಾಗೂ ಗ್ರಾಹಕರ ಮೇಲೆ ಹೊರೆ ಹೆಚ್ಚುವಂತಾಗುತ್ತದೆ ಎಂದು ಮರ್ಸಿಡೀಸ್ ಬೆಂಝ್ ಇಂಡಿಯದ ರೊಲಾಂಡ್ ಫೊಲ್ಜರ್ ತಿಳಿಸಿದ್ದಾರೆ.
ರೂಪಾಯಿ ಮೌಲ್ಯ ಹೀಗೆಯೇ ಕುಸಿದರೆ ನಾವು ಬೆಲೆಯೇರಿಕೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಆಡಿ ಇಂಡಿಯದ ಮುಖ್ಯಸ್ಥ ರಹಿಲ್ ಅನ್ಸಾರಿ ತಿಳಿಸಿದ್ದಾರೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಆಗಸ್ಟ್‌ನ ಮೊದಲ ವಾರದಲ್ಲೇ ಟಿವಿಗಳ, ಮುಖ್ಯವಾಗಿ 32 ಇಂಚಿನ ಟಿವಿಗಳ ಬೆಲೆಯಲ್ಲಿ ಏರಿಕೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಪ್ಯಾನಸೋನಿಕ್ ಇಂಡಿಯದ ಮನೀಶ್ ಶರ್ಮಾ ತಿಳಿಸಿದ್ದಾರೆ.







