‘ಕಲ್ಲುಕೋರೆಗಳ ಸುತ್ತ ಸೂಚನಾ ಫಲಕ ಅಳವಡಿಸಿ’
ಉಡುಪಿ, ಜು.25: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ಲು ಗಣಿ ಗುತ್ತಿಗೆದಾರರು, ಈಗಾಗಲೇ ಅವಧಿ ಮುಗಿದಿರುವ ಈ ಹಿಂದೆ ನಿರ್ವಹಿಸಿದ ಕಲ್ಲು ಗಣಿ ಗುತ್ತಿಗೆದಾರರು, ಪಟ್ಟಾ ಭೂಮಿಯಲ್ಲಿ ಇರುವ ಕಟ್ಟಡ ಕಲ್ಲು, ಕೆಂಪು ಕಲ್ಲು ಮತ್ತು ಆವೆ ಮಣ್ಣು ಗುಂಡಿಗಳ ಸುತ್ತಲೂ ತಂತಿ ಬೇಲಿ ಅಳವಡಿಸಿ ‘ಅಪಾಯ’ ಎಂಬ ಸೂಚನಾ ಫಲಕವನ್ನು ಅಳವಡಿಸಿ ತಂತಿ ಬೇಲಿ ಹಾಗೂ ಎಚ್ಚರಿಕೆಯ ಸೂಚನಾ ಫಲಕದ ಛಾಯಾಚಿತ್ರವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಲ್ಲಿಸುವಂತೆ ತಿಳಿಸಲಾಗಿದೆ.
ಒಂದು ವೇಳೆ ಈ ಪ್ರದೇಶದಲ್ಲಿ ಅವಘಡಗಳು ಸಂಭವಿಸಿದಲ್ಲಿ ಸಂಬಂಧಿಸಿದ ಕಲ್ಲು ಗಣಿ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಇಲಾಖೆಯ ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.
ನೀರು ತುಂಬಿರುವ ಕಲ್ಲುಗಣಿ ಗುತ್ತಿಗೆ ಪ್ರದೇಶಗಳಲ್ಲಿ ಕಲ್ಲು ತೆಗೆದ ಗುಂಡಿಗಳು, ಆವೆ ಮಣ್ಣು ಮತ್ತು ಮುರಕಲ್ಲು ಉತ್ಪಾದನೆಯಿಂದ ಉಂಟಾದ ಗುಂಡಿಗಳಲ್ಲಿ ಯಾವುದೇ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳು ಕಲ್ಲು ಕ್ವಾರಿ ಗುಂಡಿಗಳಲ್ಲಿ ಸ್ನಾನ ಮಾಡಲು ಮತ್ತು ಈಜಲು ಹೋಗಿ ಅವಘಡಗಳು ಸಂಭವಿಸಿ ಪ್ರಾಣ ಹಾನಿಯಾಗಿರುವುದು ಕಂಡು ಬಂದಿರು ವುದರಿಂದ ಸಾರ್ವಜನಿಕರು ನೀರು ತುಂಬಿರುವ ಕಲ್ಲು ಕ್ವಾರಿ ಗುಂಡಿಗಳ ಬಳಿ ತೆರಳದಂತೆ ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಾಖೆ ಉಡುಪಿ ಇವರ ಪ್ರಕಟಣೆ ತಿಳಿಸಿದೆ.







