ವೇತನಾನುದಾನಕ್ಕೆ ಒಳಪಡಿಸಲು ಶಿಕ್ಷಕರ ಒಕ್ಕೂಟ ಆಗ್ರಹ
ಬೆಂಗಳೂರು, ಜು.25: ಕರ್ನಾಟಕ ರಾಜ್ಯ ಅನುದಾನಕ್ಕೆ ಒಳಪಡುವ 1978 ರಿಂದ 1994-95 ರ ಅವಧಿಯಲ್ಲಿ ಪ್ರಾರಂಭವಾದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಒಕ್ಕೂಟ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವರದರಾಜ್, ವೇತಾನಾನುದಾನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿ ಕಳೆದ ಜು.18 ರಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ನಿರಂತರವಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಸರಕಾರ ಅಥವಾ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ 1987 ರಿಂದ 95 ರ ಅವಧಿಯಲ್ಲಿ ಆರಂಭವಾದ ಅನೇಕ ಶಾಲೆಗಳಿಗೆ ಅನುದಾನ ನೀಡುತ್ತಿದ್ದು, ಅನಗತ್ಯ ಕಾರಣ ನೀಡಿ 87 ಶಾಲೆಗಳ ಕಡತವನ್ನು ಆರ್ಥಿಕ ಇಲಾಖೆ ಅನುಮೋದನೆ ನೀಡದೆ ಹಿಂದಕ್ಕೆ ಕಳಿಸಿದ್ದಾರೆ. ಕನ್ನಡ ಮಾಧ್ಯಮದ ಈ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಿದರೆ, ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸಿಗುತ್ತದೆ ಎಂದು ಹೇಳಿದರು.
ಸರಕಾರದಿಂದ ನೀಡುತ್ತಿರುವ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಎಲ್ಲ ಯೋಜನೆಗಳೂ ಮಕ್ಕಳಿಗೆ ಅನುಕೂಲವಾಗುತ್ತದೆ. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದಾಗಿ 87 ಶಾಲೆಗಳು ಅನುದಾನದಿಂದ ವಂಚಿತವಾಗಿದ್ದು, ಒಂದು ಕಡೆ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಮತ್ತೊಂದು ಕಡೆ ನೂರಾರು ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ವೇತನವಿಲ್ಲದೆ ಜೀವನ ನಡೆಸಲು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ವರ್ಷ ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಬಾಕಿಯಿರುವ ಕಡತಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಬೇಕು ಎಂದು ಆದೇಶಿಸಿದ್ದರು. ಆದರೆ, ಅಧಿಕಾರಿಗಳು ಅನುಮೋದನೆ ನೀಡದೆ ವಂಚಿಸಲಾಗುತ್ತಿದೆ. ಹೀಗಾಗಿ, ಕೂಡಲೇ ಸರಕಾರ ನಮಗೆ ನ್ಯಾಯ ನೀಡಬೇಕು. ಅದುವರೆಗೂ ನಾವು ಧರಣಿಯನ್ನು ಮುಂದುವರಿಸಲಾಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ನಾಗರಾಜ್, ಮಹೇಶ್, ಶಿಲ್ಪಾ, ಸಂತೋಷ್, ನಾಗರತ್ನ, ಪ್ರಕಾಶ, ಸುರೇಶ, ಮೊಬಿನ್, ಜಾಫರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







