ಸಂಸ್ಕತಿ ಸಂರಕ್ಷಣೆ ಹೊಣೆ ಇಲಾಖೆಯದ್ದಾಗಲಿ: ಸಚಿವೆ ಡಾ. ಜಯಮಾಲಾ

ಮಂಗಳೂರು, ಜು.25: ಸ್ಥಳೀಯ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ಕನ್ನಡ ಸಂಸ್ಕೃತಿಯನ್ನು ಸಂರಕ್ಷಿಸುವ ಹೊಣೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಹೊಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಮಾಲಾ ಹೇಳಿದರು.
ದ.ಕ.ಜಿಪಂನಲ್ಲಿ ಬುಧವಾರ ನಡೆದ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ.ಅದರ ಸದ್ಬಳಕೆಯಾಗಬೇಕು. ಸಮುದ್ರಕ್ಕೆ ಹಾಕಿದರೂ ಅಳೆದು ಹಾಕಬೇಕಾಗುತ್ತದೆ. ಅನುದಾನ ವಿನಿಯೋಗದ ವೇಳೆ ವಿಶೇಷ ಗಮನಹರಿಸಿ ಎಲ್ಲ ಕಾರ್ಯಕ್ರಮಗಳ ದಾಖಲಾತಿಯನ್ನು ಸರಿಯಾಗಿಟ್ಟುಕೊಳ್ಳಿ ಎಂದು ಸಚಿವೆ ಜಯಮಾಲಾ ನುಡಿದರು.
ಜಿಲ್ಲೆಯ ಕಲಾವಿದರ, ಕಲಾತಂಡಗಳ ಹಾಗೂ ಇಲಾಖೆಯ ನೆರವು ಪಡೆಯುತ್ತಿರುವವರ ಸಮಗ್ರ ಪಟ್ಟಿಯನ್ನು ನೀಡಿ ಎಂದ ಸಚಿವೆ ಜಯಮಾಲಾ, ಪ್ರಾಯೋಜಿತ ಕಾರ್ಯಕ್ರಮಗಳು ಹಾಗೂ ಪ್ರೋತ್ಸಾಹ ಧನ ಪಡೆಯುತ್ತಿರುವ ಕಲಾತಂಡಗಳ ಮಾಹಿತಿ ನೀಡುವುದರೊಂದಿಗೆ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿರುವ ಜಯಂತಿಗಳ ಬಗ್ಗೆ ಸಮಗ್ರ ವರದಿಯನ್ನು ನೀಡಲು ಹೇಳಿದರು.
ಶಾಸ್ತ್ರೀಯ ಸಂಗೀತ, ಯಕ್ಷಗಾನದ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಿ ಎಂದ ಸಚಿವರು, ಕಾರ್ಯಕ್ರಮ ಆಯೋಜನೆಯ ಪರಿಕಲ್ಪನೆ ವಿಸ್ತಾರವಾಗಿರಲಿ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 15 ಕೋ.ರೂ. ವೆಚ್ಚದಲ್ಲಿ ಜಿಲ್ಲಾ ರಂಗಮಂದಿರಕ್ಕೆ ನೀಲನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬಂಟ್ವಾಳದಲ್ಲಿ ಪಂಜೆ ಮಂಗೇಶರಾಯರು ಸ್ಮಾರಕ ಭವನಕ್ಕೂ ಅನುದಾನದ ಕೊರತೆ ಇಲ್ಲ. ಅಬ್ಬಕ್ಕ ಭವನಕ್ಕೆ 8.5 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಕ್ಕೆ ನೀಲನಕ್ಷೆಯನ್ನು ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಕೋರಿ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು.
ತುಳುಭವನ ನಿರ್ಮಾಣಕ್ಕೆ ಈಗಾಗಲೇ 4.8 ಕೋ.ರೂ. ಅನುದಾನದಲ್ಲಿ ಶೇ.80ರಷ್ಟು ಕೆಲಸ ಪೂರ್ಣಗೊಂಡಿದ್ದು, ಸಂಪೂರ್ಣಗೊಳಿಸಲು ಅನುದಾನದ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.







