ಪ್ರಧಾನಿ ನಿವಾಸದಲ್ಲಿ ವಿದ್ಯುತ್ ಮೀಟರ್ ಇಲ್ಲ: ಆರ್ ಟಿಐ ಮಾಹಿತಿಯಿಂದ ಬಹಿರಂಗ
ಇದುವರೆಗೆ ಬಳಕೆಯಾದ ವಿದ್ಯುತ್ ಎಷ್ಟು?, ಅದರ ಮೊತ್ತವೆಷ್ಟು?

ಹೊಸದಿಲ್ಲಿ, ಜು.25: ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಪ್ರತಿ ತಿಂಗಳು ಖರ್ಚಾಗುವ ವಿದ್ಯುತ್ ಎಷ್ಟು ಎನ್ನುವ ಆರ್ ಟಿಐ ಪ್ರಶ್ನೆಗೆ, ‘ವಿದ್ಯುತ್ ಬಳಕೆಯ ದಾಖಲೆಗಳಾಗಲೀ ನಿವಾಸದಲ್ಲಿ ವಿದ್ಯುತ್ ಮೀಟರ್ ಆಗಲೀ ಇಲ್ಲ’ ಎನ್ನುವ ಉತ್ತರ ಲಭಿಸಿದೆ ಎಂದು timesnownews.com ವರದಿ ಮಾಡಿದೆ.
ನಿವೃತ್ತ ಸರಕಾರಿ ಅಧಿಕಾರಿಯಾಗಿರುವ ಗುರ್ಗಾಂವ್ ಮೂಲದ ಆರ್ ಟಿಐ ಕಾರ್ಯಕರ್ತ ಜಗದೀಶ್ ಸಿಂಗ್ ವಾಲಿಯಾ ಸಿಪಿಡಬ್ಲ್ಯುಡಿ ಮೂಲಕ ಆರ್ ಟಿಐ ಅರ್ಜಿ ಸಲ್ಲಿಸಿದ್ದರು. ಪ್ರತಿ ತಿಂಗಳು ಬಳಕೆಯಾಗುವ ವಿದ್ಯುತ್ ವಿವರ ಹಾಗು ಲೈಟ್ ಗಳನ್ನು ಎಲ್ ಇಡಿಯಾಗಿ ಬದಲಾಯಿಸಿದ್ದಕ್ಕೆ ತಗಲಿದ ವೆಚ್ಚದ ಬಗ್ಗೆಯೂ ಅವರು ಮಾಹಿತಿ ಕೋರಿದ್ದರು.
ಲೈಟ್ ಗಳಿಂದ ಎಲ್ ಇಡಿ ಬಲ್ಬ್ ಗಳಿಗೆ ಬದಲಾಗುವ ಸರಕಾರದ ಕ್ರಮದ ಬಗ್ಗೆ ತಿಳಿದುಕೊಂಡಿದ್ದ ಜಗದೀಶ್, ಪ್ರಧಾನಿ ನಿವಾಸದಲ್ಲಿ ಈ ಬದಲಾವಣೆಯಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಬಯಸಿದ್ದರು. “ತಮ್ಮ ನಿವಾಸದಲ್ಲಿ ವಿದ್ಯುತ್ ಉಳಿತಾಯದ ಬಗ್ಗೆ ಮೋದಿ ಆಸಕ್ತಿ ವಹಿಸಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳಲು ನಾನು ಬಯಸಿದೆ” ಎಂದು ವಾಲಿಯಾ ಹೇಳುತ್ತಾರೆ ಎಂದು timesnownews.com ವರದಿ ಮಾಡಿದೆ.
ಆದರೆ ಪ್ರಧಾನಿ ನಿವಾಸದಲ್ಲಿ ಯಾವುದೇ ವಿದ್ಯುತ್ ಮೀಟರ್ ಇಲ್ಲ ಎನ್ನುವುದು ಆರ್ ಟಿಐ ಉತ್ತರದಲ್ಲಿ ಬಹಿರಂಗಗೊಂಡಿತ್ತು. ಸರಕಾರಿ ಕಚೇರಿಗಳನ್ನು ನಿರ್ವಹಿಸುವುದು ಸಿಪಿಡಬ್ಲ್ಯುಡಿಯ ಜವಾಬ್ದಾರಿಯಾಗಿದೆ.







