ಮಕ್ಕಳ ಕಳ್ಳರು ಎಂಬ ಶಂಕೆ: ನಾಲ್ವರು ಯುವಕರಿಗೆ ಥಳಿಸಿದ ಗುಂಪು

ಕೊಲ್ಕತ್ತಾ, ಜು.25: ಮಕ್ಕಳ ಕಳ್ಳರು ಎಂಬ ಅನುಮಾನದಲ್ಲಿ ನಾಲ್ವರು ಯುವಕರ ಮೇಲೆ ಸ್ಥಳೀಯರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿಯ ದುಪ್ಗುರಿ ಪ್ರದೇಶದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕರೂ ಸ್ಥಳೀಯರೇ ಆಗಿದ್ದು ಕೆಲಸಕ್ಕೆಂದು ಕೇರಳಕ್ಕೆ ವಲಸೆ ಹೋಗಿದ್ದರು.
ಮಂಗಳವಾರ ರಾತ್ರಿ ಅವರು ತಮ್ಮ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಕೆಲವರು ಅವರನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಎರಡು ದಿನಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು ಒಂದು ವಾರದೊಳಗೆ ನಡೆದ ಮೂರನೇ ಘಟನೆಯಾಗಿದೆ. ಮಂಗಳವಾರ ಮಧ್ಯರಾತ್ರಿ ನಾಲ್ವರು ಯುವಕರು ದುಪ್ಗುರಿ ರೈಲ್ವೇ ನಿಲ್ದಾಣದಲ್ಲಿ ಇಳಿದು ತಮ್ಮ ಗ್ರಾಮ ಮುಕುಲ್ದಂಗಾದತ್ತ ತೆರಳುತ್ತಿದ್ದಾಗ ಅವರನ್ನು ಗುಂಪೊಂದು ತಡೆದು ವಿಚಾರಿಸಿದೆ. ಈ ವೇಳೆ ಯುವಕರು ತುಸು ಜೋರಾಗಿಯೇ ಮಾತನಾಡಿದ ಪರಿಣಾಮ ಎರಡು ಗುಂಪುಗಳ ಮಧ್ಯೆ ಸಂಘರ್ಷವೇರ್ಪಟ್ಟು ಸ್ಥಳೀಯ ಗುಂಪು ಯುವಕರನ್ನು ಥಳಿಸಿದೆ.
ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ನಾಲ್ವರು ಯುವಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿಯು ಪಶ್ಚಿಮ ಬಂಗಾಳದ ಗ್ರಾಮಗಳಲ್ಲೂ ಹಬ್ಬುತ್ತಿದ್ದು ಇದರಿಂದ ಜನರು ಆತಂಕಿತರಾಗಿದ್ದಾರೆ. ಹಾಗಾಗಿ ಹೊಸಬರು ಯಾರಾದರೂ ಕಂಡುಬಂದರೆ ಅವರನ್ನು ನಿಲ್ಲಿಸಿ ಪ್ರಶ್ನಿಸುತ್ತಾರೆ. ಇದನ್ನು ತಡೆಯಲು ಸಾಮೂಹಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ಸ್ಥಳೀಯಾಡಳಿತಗಳಿಗೆ ಜಾಗೃತವಾಗಿರುವಂತೆ ಸೂಚಿಸಲಾಗಿದೆ. ಇಂಥ ವದಂತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಬಿನಯ್ ಕೃಷ್ಣ ಬರ್ಮನ್ ತಿಳಿಸಿದ್ದಾರೆ.







