ನಿಮ್ಮ ಪರಿವರ್ತನೆಯ ಮೂಲ ಈ ಜೈಲಿನಿಂದಲೇ ಆರಂಭವಾಗಲಿ: ಕೈದಿಗಳಿಗೆ ದಾವಣಗೆರೆ ಡಿ.ಸಿ ಕಿವಿಮಾತು

ದಾವಣಗೆರೆ,ಜು.25: ಹಲವು ಕಾರಣಗಳಿಂದ ಬಂಧಿಯಾಗಿರುವ ನಿಮಗೆ ಪರಿವರ್ತನೆಯ ಗಾಳಿ ಇಲ್ಲಿಂದಲೇ ಬೀಸಬೇಕು. ನೀವು ಇಲ್ಲಿಂದ ಹೊರಹೋದ ನಂತರ ನಿಮ್ಮಲ್ಲಾಗಿರುವ ಬದಲಾವಣೆ ಎಲ್ಲರೂ ನೋಡುವಂತಾಗಬೇಕು. ನಿಮ್ಮ ಪರಿವರ್ತನೆಯ ಮೂಲ ಈ ಜೈಲಿನಿಂದಲೇ ಆರಂಭವಾಗಲಿ ಎಂದು ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಕೈದಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಕಾರಾಗೃಹದಲ್ಲಿ ಏರ್ಪಡಿಸಲಾಗಿದ್ದ ಗುಣೇಶ ಭಾರತೀಯ ಪ್ರತಿಷ್ಠಾನ ಹಾಗೂ ಜಿಲ್ಲಾ ಕಾರಾಗೃಹ ಇಲಾಖೆ ಆಶ್ರಯದಲ್ಲಿ ನಡೆದ ‘ನನ್ನ ಕಥೆ ನಿಮ್ಮ ಜೊತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಜೈಲಿನಿಂದ ಹೊರಗಿರುವ ನಾವು ಜೀವನದ ಒಂದು ಮುಖ ಮಾತ್ರ ನೋಡಿದ್ದೇವೆ. ಆದರೆ ನೀವು ಎರಡೂ ಮುಖ ನೋಡಿದ್ದೀರಿ. ಅನುಭವಿಸದ್ದೀರಿ. ಒಳ್ಳೆಯ ಹಾಗೂ ಕೆಟ್ಟದರ ನಿರ್ಧಾರ ನಮಗಿಂತ ನೀವು ಚೆನ್ನಾಗಿ ಮಾಡಬಲ್ಲಿರಿ. ಹಾಗಾಗಿ, ನೀವು ಮುಂದಿನ ದಿನಗಳಲ್ಲಿ ಒಳ್ಳೆಯವರಾಗಿ ಬಾಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ. ನಾವು ಬದಲಾದರೆ ಸಮಾಜ ಬದಲಾಗುತ್ತದೆ. ನಾವೇ ಬದಲಾಗದೆ ಸಮಾಜ ಬದಲಿಸಲು ಸಾಧ್ಯವಿಲ್ಲ. ನಿಮ್ಮ ಪರಿವರ್ತನೆಯ ಮೂಲ ಜೈಲಿನಿಂದಲೇ ಆಗಲಿ ಎಂದರು.
ಶ್ರೀ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಮಾತನಾಡಿ, ಎಲ್ಲರೂ ಒಂದಿಲ್ಲೊಂದು ಸಂದರ್ಭ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆದರೆ ಮಹಾತ್ಮನಾಗುತ್ತಾನೆ. ಇದಕ್ಕೆ ಸ್ಪಷ್ಟ ನಿದರ್ಶನ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಎಂದು ಹೇಳಿದರು. ಮಹಾತ್ಮ ಗಾಂಧೀಜಿ ಬಾಲ್ಯದಲ್ಲಿ ಮಾಡಿದ ತಪ್ಪು ತಿದ್ದಿಕೊಂಡು ಮುಂದೆಂದೂ ಅಂತಹ ತಪ್ಪಗಳನ್ನು ಮಾಡದಂತೆ ಸಕಾರಾತ್ಮಕ ಚಿಂತನೆ ಮಾಡುತ್ತಲೇ ಅವರು ಮಹಾತ್ಮರಾದರು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ ಮಾತನಾಡಿ, ಹಿಂದಿನಂತೆ ಈಗ ಒಟ್ಟು ಕುಟುಂಬಗಳಿಲ್ಲ. ಹೀಗಾಗಿ, ಮಕ್ಕಳಿಗೆ ಕಥೆ ಹೇಳುವ ಅಜ್ಜಿಯರೂ ಸಿಗುತ್ತಿಲ್ಲ. ಅಜ್ಜಿ ಹೇಳುವ ಕಥೆಗಳು ಮಕ್ಕಳನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದ್ದವು. ಸ್ವರ್ಗ ನರಕ ಪಾಪ ಪುಣ್ಯದ ಅರಿವು ನಮಗಿದೆ. ನಮಗೆ ಸ್ವರ್ಗ ಸಿಗಬೇಕು ಅಂದರೆ ಪುಣ್ಯದ ಕೆಲಸ ಮಾಡಬೇಕು. ಅಂದರೆ ನಮ್ಮ ಆತ್ಮ ಹೇಳಿದಂತೆ ನಾವು ನಡೆದುಕೊಳ್ಳಬೇಕು ಎಂದರು.
ಇದಕ್ಕೂ ಮೊದಲು ಪಿ.ವಿ ಗುಣೇಶ್ ಭಾರತೀಯ ಹಲವು ಕಥೆಗಳನ್ನು ಮತ್ತು ತತ್ವಪದ ಹೇಳುವ ಮೂಲಕ ಕೈದಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಕರಣ ಬಿ. ಕ್ಷತ್ರಿ ಅಧ್ಯಕ್ಷತೆ ವಹಿಸಿದ್ದರು. ಎಂ. ಬಿ ಸಂಗಮೇಶಗೌಡರು, ಬಿಇಓ ಪುಷ್ಪಲತ ಇದ್ದರು.







