ಝಾಕಿರ್ ನಾಯ್ಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ವಿಫಲವಾದ ಇಂಟರ್ ಪೋಲ್

ಹೊಸದಿಲ್ಲಿ, ಜು. 25: ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಲ್ಲಿ ಇಂಟರ್‌ಪೋಲ್ ವಿಫಲವಾಗಿದೆ. ಝಾಕಿರ್ ನಾಯ್ಕ್ ರಿಗೆ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ 2017 ಮೇ 19ರಂದು ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಿದ್ದೇವೆ ಎಂದು ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಲೋಕಸಭೆಯಲ್ಲಿ ತಿಳಿಸಿದರು.
ಕಳೆದ ವರ್ಷ ಆಗಸ್ಟ್ 10ರಂದು ಇಂಟರ್ ಪೋಲ್ ಸ್ಪಷ್ಟನೆ ಕೇಳಿತ್ತು. ಅದೇ ವರ್ಷ ಅಕ್ಟೋಬರ್ 6ರಂದು ನಾವು ಸ್ಪಷ್ಟನೆ ನೀಡಿದ್ದೆವು ಎಂದು ಅವರು ಹೇಳಿದ್ದಾರೆ. ಆದರೆ, ಇಂಟರ್‌ಪೋಲ್‌ಗೆ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಲು ಮನವಿ ಕಳುಹಿಸುವ ವರೆಗೆ ಆರೋಪ ಪಟ್ಟಿ ದಾಖಲಾಗದ ಕಾರಣ ಗಡಿಪಾರು ಉದ್ದೇಶದಿಂದ ಝಾಕಿರ್ ನಾಯ್ಕ್ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸು ವುದು ಅಪಕ್ವವಾಗಿದೆ ಎಂದು ಇಂಟರ್‌ಪೋಲ್ ಹೇಳಿತ್ತು ಎಂದು ಅಹಿರ್ ತಿಳಿಸಿದ್ದಾರೆ. ಝಾಕಿರ್ ನಾಯ್ಕ್ ವಿರುದ್ಧ ಹೊಸ ಬಂಧನಾದೇಶವನ್ನು ನ್ಯಾಯಾಲಯ ಜಾರಿಗೊಳಿಸಿದೆ. ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸವಂತೆ ಕೋರಿ ಇಂಟರ್‌ಪೋಲ್‌ಗೆ 2018 ಜನವರಿ 3ರಂದು ಮನವಿ ಸಲ್ಲಿಸಲಾಗಿದೆ. ಇದುವರೆಗೆ ಇಂಟರ್‌ಪೋಲ್‌ನಿಂದ ಯಾವುದೇ ಮಾಹಿತಿ ಸ್ವೀಕರಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅಹಿರ್ ಲಿಖಿತ ಉತ್ತರ ನೀಡಿದರು.





