ಮಹಿಳಾ ಐಎಎಸ್ ಆಕಾಂಕ್ಷಿ ಮೃತ್ಯು: ಜೊತೆಗಾರನ ವಿರುದ್ಧ ಕೊಲೆ ಪ್ರಕರಣ ದಾಖಲು

ಗುರ್ಗಾಂವ್,ಜು.25: ಐಎಎಸ್ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದ 23ರ ಹರೆಯದ ಯುವತಿಯೋರ್ವಳು ಸೋಮವಾರ ಸಂಜೆ ತನ್ನ ಪರಿಚಿತ ವ್ಯಕ್ತಿಯೊಂದಿಗೆ ಇಲ್ಲಿಯ ಹೋಟೆಲ್‌ವೊಂದರಲ್ಲಿ ತಂಗಿದ ನಾಲ್ಕೇ ಗಂಟೆಗಳಲ್ಲಿ ಮೃತಪಟ್ಟಿದ್ದಾಳೆ.
ಸಮೀಪದ ಕಡಿಪುರ ಕೈಗರಿಕಾ ಪ್ರದೇಶದ ನಿವಾಸಿಯಾದ ಯುವತಿಯನ್ನು ಪ್ರಿಯಾಂಕಾ ಎಂದು ಹೆಸರಿಸಲಾಗಿದ್ದು,ಆಕೆ ಸೋಮವಾರ ರಾತ್ರಿ 8:30ರ ಸುಮಾರಿಗೆ ರವೀಂದ್ರ ಯಾದವ್(24) ಎಂಬಾತನೊಂದಿಗೆ ಹೋಟೆಲ್‌ಗೆ ಬಂದು ರೂಮ್ ಪಡೆದುಕೊಂಡಿದ್ದಳು. ಬೆಳಗಿನ ಜಾವ ಪ್ರಿಯಾಂಕಾಳನ್ನು ಆಸ್ಪತೆಗೆ ಒಯ್ದಿದ್ದ ರವೀಂದ್ರ ಅಲ್ಲಿಂದ ಪರಾರಿಯಾಗಿದ್ದಾನೆ. ಯುವತಿಯನ್ನು ಆಸ್ಪತ್ರೆಗೆ ತರುವ ಮೊದಲೇ ಸಾವನ್ನಪ್ಪಿದ್ದಳು ಎಂದು ವೈದ್ಯರು ಘೋಷಿಸಿದ್ದಾರೆ.
ಯಾದವ್ ಬಹುದಿನಗಳಿಂದ ತನ್ನ ಪುತ್ರಿಯ ಹಿಂದೆ ಬಿದ್ದಿದ್ದ. ಆತನಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆತ ಆಕೆಯನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಪ್ರಿಯಾಂಕಾಳ ತಂದೆ ಪ್ರೇಮಚಂದ್ ಆರೋಪಿಸಿದ್ದಾರೆ.
ಯಾದವ್ ತಲೆಮರೆಸಿಕೊಂಡಿದ್ದು,ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಕೃತ್ತು ಭಾಗಶಃ ಛಿದ್ರಗೊಂಡಿದ್ದು,ಆಂತರಿಕ ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದು ಪಿಯಾಂಕಾಳ ಮರಣೋತ್ತರ ಪರೀಕ್ಷಾ ವರದಿಯು ಬೆಟ್ಟು ಮಾಡಿದೆ.





