ಕಾಳುಮೆಣಸು ಆಮದು ನೀತಿಯಲ್ಲಿ ಬದಲಾವಣೆ: ಕೇಂದ್ರ ಸಚಿವ ಸುರೇಶ್ ಪ್ರಭು ಭರವಸೆ
ಮೂಡಿಗೆರೆ, ಜು.25: ಕೇಂದ್ರ ವಾಣಿಜ್ಯ ಮಂತ್ರಿ ಸುರೇಶ್ ಪ್ರಭು ಅವರನ್ನು ವಿವಿಧ ಬೆಳೆಗಾರರ ಸಂಘ ಹಾಗೂ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಶಾಸಕ ಎಂಪಿ ಕುಮಾರಸ್ವಾಮಿ ನೇತೃತ್ವದ ತಂಡ ದೆಹಲಿಯಲ್ಲಿ ಭೇಟಿ ಮಾಡಿ ಮಲೆನಾಡು ಭಾಗದ ಬೆಳೆಗಾರರ ಸಮಸ್ಯೆಯನ್ನು ಪ್ರಸ್ತಾಪಿಸಲಾಯಿತು.
ಈ ವೇಳೆ ಕಾಳುಮೆಣಸು ಬೆಳೆಗೆ ಬೆಂಬಲ ಬೆಲೆ ನಿಗದಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತೆಂದು ಕಾಫಿ ಮಂಡಳಿ ಅಧ್ಯಕ್ಷ ಭೋಜೇಗೌಡ, ಕೆಜಿಎಫ್ ಅಧ್ಯಕ್ಷ ಜೈರಾಂ, ಬ್ಲಾಕ್ ಗೋಲ್ಡ್ ಲೀಗ್‍ನ ಕೆಂಜಿಗೆ ಕೇಶವ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದಕ್ಕೆ ಸಚಿವ ಸುರೇಶ್ ಪ್ರಭು ಪ್ರತಿಕ್ರಿಯಿಸಿ, ಕಾಳುಮೆಣಸು ಕೆ.ಜಿಗೆ ರೂ.500ಕ್ಕಿಂತ ಕಡಿಮೆಯಿದ್ದಾಗ ಎಲ್ಲೂ ಆಮದು ಮಾಡಿಕೊಳ್ಳದಂತೆ ಕಾನೂನು ರೂಪಿಸುವುದರೊಂದಿಗೆ ಬೆಂಬಲ ಬೆಲೆನಿಗದಿಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬಳಿಕ ಕೃಷಿ ಖಾತೆ ಮಂತ್ರಿ ರಾಧಾ ಮೋಹನ್ ಸಿಂಗ್ ಅವರನ್ನು ನಿಯೋಗ ಭೇಟಿ ಮಾಡಿತು. ಕೃಷಿ ಅತೀವೃಷ್ಟಿಯಿಂದ ನಾಶವಾಗಿದ್ದು, ಬೆಂಬಲ ಬೆಲೆ ನೀಡಬೇಕು ಮತ್ತು ಪುನಶ್ಚೇತನಕ್ಕೆ ಪ್ಯಾಕೇಜ್ ನೀಡಬೇಕೆಂದು ಬೇಡಿಕೆ ಸಲ್ಲಿಸಲಾಯಿತು. ನಿಯೋಗದ ಭೇಟಿ ನಂತರ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಕಾಳುಮೆಣಸು 500 ರೂ. ಕಡಿಮೆಯಿದ್ದಾಗ ಆಮದಿಗೆ ಸಂಪೂರ್ಣ ಕಡಿವಾಣ ಹಾಕುವುದು ಒಳ್ಳೆಯ ನಿರ್ಧಾರವಾಗಿದೆ ಎಂದರು.
ನಿಯೋಗದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಭೋಜೇಗೌಡ, ಕೆಜಿಎಫ್ ಅಧ್ಯಕ್ಷ ಜೈರಾಂ, ಬ್ಲಾಕ್ ಗೋಲ್ಡ್ ಲೀಗ್‍ನ ಕೆಂಜಿಗೆ ಕೇಶವ್, ಕೋಮಾರ್ಕ್ ಅಧ್ಯಕ್ಷ ಅರೇಕೂಡಿಗೆ ಶಿವಣ್ಣ, ವಿ.ಕೆ.ಶಿವೇಗೌಡ, ಬಿಜೆಪಿ ಮಂಡಳ ಅಧ್ಯಕ್ಷ ಪ್ರಮೋದ್, ವಿನೋದ್ ಕಣಚೂರು, ನಯನ ತಳವಾರ, ಸಂಜಯ್ ಕೊಟ್ಟಿಗೆಹಾರ ಮತ್ತಿತರರು ಉಪಸ್ಥಿತರಿದ್ದರು.