ಪಾಕ್ ಚುನಾವಣೆ : ಇಮ್ರಾನ್ ಪಕ್ಷ ಮುನ್ನಡೆಯಲ್ಲಿ

ಇಸ್ಲಾಮಾಬಾದ್,ಜು.25: ಪಾಕಿಸ್ತಾನ ಸಂಸತ್ ಚುನಾವಣೆಗಳು ಬುಧವಾರ ನಡೆದಿವೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ಮತ್ತು ಜೈಲಿನಲ್ಲಿರುವ ಮಾಜಿ ಪ್ರಧಾನಿ ನವಾಝ್ ಶರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಝ್(ಪಿಎಂಎನ್‌ಎನ್)ಕಣದಲ್ಲಿರುವ ಪ್ರಮುಖ ಪಕ್ಷಗಳಾಗಿವೆ. ಮತಎಣಿಕೆ ಆರಂಭಗೊಂಡಿದ್ದು,ಆರಂಭಿಕ ಸುತ್ತುಗಳಲ್ಲಿ ಇಮ್ರಾನ್ ಅವರ ಪಿಟಿಐ ಮುನ್ನಡೆಯನ್ನು ಪಡೆದಿದೆ. ಆದರೆ ಮತ ಎಣಿಕೆ ಪೂರ್ಣಗೊಂಡು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲು ಇನ್ನೂ 24 ಗಂಟೆಗಳ ಕಾಲ ಕಾಯಬೇಕಿದೆ.
ಹಾಲಿ ಸರಕಾರವು ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸಿರುವ ಎರಡನೇ ಚುನಾಯಿತ ಸರಕಾರವಾಗಿದೆ. 2013ರಲ್ಲಿ ಮೊದಲನೇ ಬಾರಿಗೆ ಚುನಾಯಿತ ಸರಕಾರವೊಂದು ತನ್ನ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿತ್ತು.
ಆರಂಭಿಕ ಅಂಕಿಅಂಶಗಳಂತೆ ಪಿಟಿಐ ಪಿಎಂಎಲ್‌ಎನ್‌ಗಿಂತ ಅಲ್ಪ ಮುನ್ನಡೆಯಲ್ಲಿದೆ. ತ್ರಿಶಂಕು ಫಲಿತಾಂಶ ಹೊರಬಿದ್ದರೆ ಮೈತ್ರಿ ಸರಕಾರದ ರಚನೆಗಾಗಿ ಮಾತುಕತೆಗಳು ನಡೆಯಬಹುದು ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ.
ಸಂಸತ್ತಿನ ಕೆಳಮನೆಯಾಗಿರುವ ನ್ಯಾಷನಲ್ ಅಸೆಂಬ್ಲಿಯ 272 ಸ್ಥಾನಗಳಿಗಾಗಿ 30ಕ್ಕೂ ಅಧಿಕ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಪಂಜಾಬ್,ಸಿಂಧ್,ಬಲೂಚಿಸ್ತಾನ್ ಮತ್ತು ಖೈಬರ್ ಫಖ್ತುಂಖ್ವಾ ಪ್ರಾಂತೀಯ ಸಂಸತ್‌ಗಳ 577 ಸ್ಥಾನಗಳಿಗಾಗಿ 8,396 ಅಭ್ಯರ್ಥಿಗಳು ಕಣದಲ್ಲಿದ್ದಾರೆ.







