ಮಲೆನಾಡನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಲು ಜೆಡಿಎಸ್ ಮುಖಂಡ ದೇವರಾಜ್ ಒತ್ತಾಯ

ಚಿಕ್ಕಮಗಳೂರು, ಜು.25: ಮಲೆನಾಡು ಪ್ರದೇಶದಲ್ಲಿ ಈ ಬಾರಿ ಅತೀಯಾದ ಮಳೆಯಾಗಿದ್ದು, ಕಾಫಿ, ಅಡಿಕೆ, ಕಾಳುಮೆಣಸು ಮತ್ತಿತರ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾಳಾಗಿವೆ. ಆದ್ದರಿಂದ ಸರಕಾರ ಮಲೆನಾಡು ಭಾಗವನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಪ್ರದೇಶದಲ್ಲಿ ವಾಡಿಕೆಗಿಂತ 150ರಿಂದ 200 ಇಂಚಿಗೂ ಹೆಚ್ಚು ಮಳೆಯಾಗಿದೆ. ಅಡಿಕೆ, ಕಾಫಿ, ಭತ್ತ, ಏಲಕ್ಕಿ ಹಾಗೂ ಕಾಳು ಮೆಣಸು ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕಾಫಿ ಹಾಗೂ ಅಡಿಕೆಗೆ ಸಕಾಲದಲ್ಲಿ ಕೊಳೆ ನಾಶಕ ಸಿಂಪಡಣೆಗೂ ಮಳೆ ಅವಕಾಶ ನೀಡಿಲ್ಲ. ಪರಿಣಾಮವಾಗಿ ಕಾಫಿ, ಅಡಿಕೆ ತೋಟಗಳು ಕೊಳೆ ಹರಡಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರಕ್ಕೆ ಕೇಂದ್ರ ಸರಕಾರದ ಮೇಲೆ ಇಲ್ಲಿನ ಸಂಸದರು ಒತ್ತಡ ತರಬೇಕೆಂದ ಅವರು, ಅಡಿಕೆ, ಕಾಫಿ ಮತ್ತು ಕಾಳು ಮೆಣಸು ಬೆಳೆಗಾರರ ಸಾಲವನ್ನು ಕೇಂದ್ರ ಸರಕಾರ ಕೂಡಲೇ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರು ಆಗೊಮ್ಮೆ, ಈಗೊಮ್ಮೆ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಮಲೆನಾಡು ಪ್ರದೇಶದಲ್ಲಿ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿದ್ದರೂ ಸೌಜನ್ಯಕ್ಕಾದರೂ ಇದುವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ, ಬೆಳೆಗಾರರಿಗೆ ಸೂಕ್ತ ಪರಿಹಾರಕ್ಕೆ ಲೋಕಸಭಾ ಸದಸ್ಯರು ಕೇಂದ್ರದ ಗಮನ ಸೆಳೆಯುವ ಕೆಲಸ ಮಾಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲು ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ನಾಲ್ಕು ವರ್ಷದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ಅವರು ಕೇವಲ ಕಾಲಹರಣ ಮಾಡಿದ್ದಾರೆ. ಈಗಲಾದರೂ ಅವರು ರೈತರ ನೆರವಿಗೆ ಬರಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಮಂಜಪ್ಪ, ಚಂದ್ರಪ್ಪ, ರಮೇಶ್, ಝಮೀಲ್ ಅಹ್ಮದ್, ಹೊಲದಗದ್ದೆ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ಸಿ.ಟಿ.ರವಿ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ಕರಗಡ ಕುಡಿಯುವ ನೀರು ಯೋಜನೆ ಕಳಪೆ ಕಾಮಗಾರಿಯಾಗಿದೆ. ಲೋಕಾಯುಕ್ತ ತನಿಖೆಗೆ ಒಳಪಡಿಸುವುದಾಗಿ ಹೇಳಿಕೆ ನೀಡಿದ್ದಾರೆ. ನಾವು ನಾಲ್ಕು ವರ್ಷದಿಂದ ಕಾಮಗಾರಿ ಕಳಪೆಯಾಗಿದೆ. ತಾಂತ್ರಿಕ ದೋಷವಿದೆ ಎಂದು ಹೇಳಿಕೊಂಡೆ ಬರುತ್ತಿದ್ದೇವೆ. ಶಾಸಕರಿಗೆ ಈಗ ಜ್ಞಾನೋದಯವಾಯಿತೇ ಎಂದು ಲೇವಡಿ ಮಾಡಿದ ದೇವರಾಜ್, ತನಿಖೆ ಯಾರಮೇಲೆ ಮಾಡಿಸುತ್ತೀರಾ? ಗುತ್ತಿಗೆದಾರನ ಮೇಲೋ, ಇಂಜಿನಿಯರ್‌ಗಳ ಮೇಲೋ ಎಂದು ಪ್ರಶ್ನಿಸಿದ ಅವರು, ಕಳಪೆ ಕಾಮಗಾರಿಯ ಸಂಪೂರ್ಣ ಜವಾಬ್ದಾರಿಯನ್ನು ಶಾಸಕ ಸಿ.ಟಿ.ರವಿ ಹೊರಬೇಕು ಎಂದರು.







