ಆರ್ಥಿಕ ಅಪರಾಧಿಗಳ ಕಾಯ್ದೆ 2018ಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ
ಹೊಸದಿಲ್ಲಿ, ಜು.25: ಬೃಹತ್ ಮೊತ್ತದ ಬ್ಯಾಂಕ್ ಸಾಲಗಳನ್ನು ವಂಚಿಸಿ ದೇಶ ಬಿಟ್ಟು ಪರಾರಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ರೂಪಿಸಲಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆ 2018ಕ್ಕೆ ಬುಧವಾರ ಸಂಸತ್‌ನಲ್ಲಿ ಸಮ್ಮತಿ ದೊರಕಿದೆ. ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ 2018ನ್ನು ರಾಜ್ಯಸಬೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಲೋಕಸಭೆಯಲ್ಲಿ ಈ ಕಾಯ್ದೆಗೆ ಜುಲೈ 19ರಂದು ಅಂಗೀಕರ ಲಭಿಸಿದೆ. ಜನರು ದೇಶದಿಂದ ಪರಾರಿಯಾಗಿ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಅದನ್ನು ತಕ್ಷಣ ತಡೆಯುವ ಅಗತ್ಯವಿದ್ದು ಸದ್ಯವಿರುವ ಕಾನೂನು ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ ಎಂದು ವಿತ್ತ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಸದ್ಯ ರೂಪಿಸಲಾಗಿರುವ ಕಾನೂನು ಆರ್ಥಿಕ ಅಪರಾಧಿಗಳು ದೇಶ ಬಿಟ್ಟು ಪರಾರಿಯಾಗುವುದನ್ನು ತಡೆಯಲು ಪರಿಣಾಮಕಾರಿ ಮತ್ತು ಸಾಂವಿಧಾನಿಕ ಸಾಧನವಾಗಿದೆ. ಆರ್ಥಿಕ ಅಪರಾಧಿಗಳು ನ್ಯಾಯಾಲಯಕ್ಕೆ ಹಾಜರಾಗುವವರೆಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವ ಅಧಿಕಾರವನ್ನು ನೀಡುವಂಥ ಹೊಸ ಕಾನೂನು ಅಥವಾ ಶಾಸಕೀಯ ಬದಲಾವಣೆಯ ಅಗತ್ಯವಿತ್ತು. ಹೀಗೆ ಜಪ್ತಿ ಮಾಡಲಾದ ಆಸ್ತಿಗಳ ನಿಬಾವಣೆ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದು ಗೋಯಲ್ ತಿಳಿಸಿದ್ದಾರೆ.





