ಇಂದು ಭಾರತ-ಐರ್ಲೆಂಡ್ ಪಂದ್ಯ

ಲಂಡನ್, ಜು. 25: ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದ್ದ ಭಾರತದ ಮಹಿಳಾ ಹಾಕಿ ತಂಡ ಗುರುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದ್ದು, ಮೊದಲ ಗೆಲುವು ದಾಖಲಿಸುವ ವಿಶ್ವಾಸದಲ್ಲಿದೆ.
‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್‌ಗೆ ಸೋಲುಣಿಸುವ ಎಲ್ಲ ಅವಕಾಶ ಇದ್ದರೂ, ಪಂದ್ಯವನ್ನು 1-1 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಳಿಸಿದೆ. ಭಾರತದ ಪರ ನೇಹಾ ಗೋಯಲ್ 25ನೇ ನಿಮಿಷದಲ್ಲಿ ತಂಡದ ಗೋಲು ಖಾತೆ ತೆರೆದಿದ್ದರು. 54ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಲಿಲ್ಲಿ ಒವ್‌ಸ್ಲಿ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದ್ದರು. ‘‘ಐರ್ಲೆಂಡ್ ವಿರುದ್ಧ ಗೆಲ್ಲುವ ಅವಕಾಶ ಇದ್ದರೂ ಆ ತಂಡದ ಸವಾಲನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂದು ಭಾರತ ತಂಡದ ಕೋಚ್ ಶೋರ್ಡ್ ಮ್ಯಾರಿಜ್ನೆ ತಿಳಿಸಿದ್ದಾರೆ. 16ನೇ ರ್ಯಾಂಕಿನ ಐರ್ಲೆಂಡ್ ತಂಡ ಕಳೆದ ಪಂದ್ಯದಲ್ಲಿ 7ನೇ ರ್ಯಾಂಕಿನ ಅಮೆರಿಕ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿತ್ತು. ಒಂದು ಪಂದ್ಯದಲ್ಲಿ ಜಯ ಗಳಿಸಿರುವ ಐರ್ಲೆಂಡ್ ಅಗ್ರಸ್ಥಾನಕ್ಕೇರಿದೆ. ಇನ್ನೊಂದು ಪಂದ್ಯ ಜಯಿಸಿದರೆ ನಾಕೌಟ್ ಹಂತಕ್ಕೆ ತೇರ್ಗಡೆಯಾಗಲಿದೆ. ಭಾರತ ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಜಯ ಗಳಿಸದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿದೆ.
ಕಳೆದ ವರ್ಷ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎಚ್‌ಡಬ್ಲುಎಲ್ ಸೆಮಿಫೈನಲ್‌ನಲ್ಲಿ ಐರ್ಲೆಂಡ್ ವಿರುದ್ಧ ಭಾರತ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶ ಸಿಕ್ಕಿದೆ. ‘‘ ಐರ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ದೇವೆ. ಈ ಕಾರಣದಿಂದಾಗಿ ಭಾರತ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸಲಿದೆ ’’ ಎಂದು ಗೋಲು ಕೀಪರ್ ಸವಿತಾ ಹೇಳಿದ್ದಾರೆ.ಐರ್ಲೆಂಡ್ ವಿರುದ್ಧ ಭಾರತ ಜಯ ಗಳಿಸಿದರೆ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿದೆ. ಜುಲೈ 29ರಂದು ಅಮೆರಿಕ ವಿರುದ್ಧ ನಡೆಯಲಿರುವ ಕೊನೆಯ ಪಂದ್ಯವನ್ನು ಕಾಯಬೇಕಿಲ್ಲ. ‘ಸಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು ಸ್ಪೇನ್ ಎದುರಿಸಲಿದೆ.







